ಮಡಿಕೇರಿ, ಜೂ. 20: ಬೆಂಗಳೂರು ಕೊಡವ ಸಮಾಜದ ಅಧೀನದಲ್ಲಿ ಕೊಡವ ಸಮಾಜ ಹಾಗೂ ಯೂತ್ ಕೌನ್ಸಿಲ್ ವತಿಯಿಂದ ಜನರಲ್ ಕೊಡಂದೆರ ಎಸ್. ತಿಮ್ಮಯ್ಯ ಸ್ಮಾರಕ 4ನೇ ವರ್ಷದ ಕೊಡವ ಅಂತರ ಸಂಘ ಕ್ರಿಕೆಟ್ ಪಂದ್ಯಾವಳಿ ತಾ. 16 ರಿಂದ ಅಲ್ಲಿನ ಮೌಂಟ್ ಕಾರ್ಮಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿದೆ. ಪಂದ್ಯಾವಳಿಯಲ್ಲಿ ಕೊಡವ ಸಮಾಜಕ್ಕೆ ಸಂಬಂಧಿಸಿದ 26 ಅಂತರ ಕೊಡವ ಸಂಘಗಳು ಪಾಲ್ಗೊಂಡಿವೆ. ಪಂದ್ಯಾವಳಿ ಜುಲೈ 14ರ ತನಕ ಜರುಗಲಿದ್ದು, ಅಂದು ಫೈನಲ್ ಪಂದ್ಯ ಜರುಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಕೊಡವ ಸಮಾಜದ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ, ಉಪಾಧ್ಯಕ್ಷೆ ಮಲ್ಲೇಂಗಡ ಮೀರಾ ಜಲಜಕುಮಾರ್, ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ, ಜಂಟಿ ಕಾರ್ಯದರ್ಶಿ ಕೊಕ್ಕಲೆರ ಟಿ. ಕುಟ್ಟಪ್ಪ, ಬಾಳೆಕುಟ್ಟಿರ ಬಿ. ನಂಜಪ್ಪ ಯೂತ್ ಕೌನ್ಸಿಲ್‍ನ ಅಧ್ಯಕ್ಷ ಚೋಕಂಡ ಸೂರಜ್ ಹಾಗೂ ಇತರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.