ಸೋಮವಾರಪೇಟೆ, ಜೂ. 20: ಇಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಶೌಚಾಲಯ ಸಾರ್ವಜನಿಕ ಪ್ರಯಾಣಿಕರ ಉಪಯೋಗಕ್ಕಿಲ್ಲದೇ ‘ವೇಸ್ಟ್’ ಎಂಬಂತಾಗಿದೆ.

ಕೋಟಿ ವೆಚ್ಚದ ಕ್ರಿಯಾಯೋಜನೆಯಲ್ಲಿ ಬಸ್ ನಿಲ್ದಾಣ ಮತ್ತು ಹೈಟೆಕ್ ಶೌಚಾಲಯ ನಿರ್ಮಿಸಿರುವ ನಿಗಮದವರು, ಶೌಚಾಲಯದ ಗುಂಡಿಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಿನ್ನೆಲೆ ವರ್ಷದ ಹಲವು ದಿನಗಳ ಕಾಲ ಬಂದ್ ಆಗಿರುತ್ತದೆ. ಶೌಚಾಲಯದ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದ್ದು, ಮೂಲಭೂತ ಸೌಕರ್ಯ ಸಮರ್ಪಕವಾಗಿ ಒದಗಿಸದ ಹಿನ್ನೆಲೆ ಅವ್ಯವಸ್ಥೆ ಹಾಗೆಯೇ ಉಳಿದುಕೊಂಡಿದೆ. ಶೌಚಾಲಯದ ಗುಂಡಿ ತುಂಬಿದರೆ ಗುತ್ತಿಗೆದಾರ ಏಜೆನ್ಸಿಯ ಕೆಲಸಗಾರರು ಬಾಗಿಲು ಬಂದ್ ಮಾಡುತ್ತಾರೆ.

ಈ ಬಗ್ಗೆ ಕೇಳಿದರೆ ನೀರಿಲ್ಲ, ಪಿಟ್ ತುಂಬಿದ್ದು, ಅದನ್ನು ಪಂಚಾಯಿತಿಯವರು ತೆರವುಗೊಳಿಸಿಲ್ಲ ಎಂದು ಸಬೂಬು ನೀಡುತ್ತಾರೆ. ದಿನಂಪ್ರತಿ 100ಕ್ಕೂ ಅಧಿಕ ಬಸ್ ಸೋಮವಾರಪೇಟೆ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಸಾವಿರಾರು ಪ್ರಯಾಣಿಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿರುತ್ತಾರೆ.

ಗ್ರಾಮೀಣ ಭಾಗದಿಂದ ಮತ್ತು ದೂರದೂರುಗಳಿಂದ ಆಗಮಿಸುವ ಪ್ರಯಾಣಿಕರು ಶೌಚಾಲಯಕ್ಕೆ ತೆರಳಬೇಕೆಂದರೂ ಸೌಕರ್ಯವಿಲ್ಲದೇ ಪರದಾಟ ಅನುಭವಿಸುತ್ತಿದ್ದಾರೆ. ಹಲವಷ್ಟು ಪುರುಷರು ಬಸ್‍ನಿಲ್ದಾಣದ ಕಾಂಪೌಂಡ್‍ನಲ್ಲಿ ತಮ್ಮ ಮೂತ್ರಬಾಧೆ ತೀರಿಸಿಕೊಳ್ಳುತ್ತಿದ್ದು, ಮಹಿಳೆಯರ ಸ್ಥಿತಿಯಂತೂ ಹೇಳತೀರದ್ದಾಗಿದೆ.

ಕನಿಷ್ಟ ಪಕ್ಷ ಶೌಚಾಲಯವನ್ನು ನಿರ್ವಹಿಸಲಾಗದ ಸ್ಥಿತಿಯಲ್ಲಿರುವ ರಸ್ತೆ ಸಾರಿಗೆ ನಿಗಮಕ್ಕೆ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದು, ಅವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಶೌಚಾಲಯದ ಪಿಟ್ ಗುಂಡಿಯನ್ನು ದುರಸ್ತಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಇಲಾಖೆಯನ್ನು ಆಗ್ರಹಿಸಿದ್ದಾರೆ. ದಿನವೊಂದಕ್ಕೆ 4 ಸಾವಿರ ಲೀಟರ್ ನೀರು ಶೌಚಾಲಯಕ್ಕೆ ಬಳಕೆಯಾಗುತ್ತಿದ್ದು, ಅಷ್ಟೊಂದು ನೀರು ಶೌಚ ಗುಂಡಿಯಲ್ಲಿ ಇಂಗುತ್ತಿಲ್ಲ. ಇದರಿಂದಾಗಿ ಆಗಾಗ್ಗೆ ಗುಂಡಿ ತುಂಬುತ್ತಿದೆ ಎಂದು ಸಂಚಾರ ನಿಯಂತ್ರಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದ ಶೌಚಾಲಯದ ಅವ್ಯವಸ್ಥೆ ಬಗ್ಗೆ ರಸ್ತೆ ಸಾರಿಗೆ ನಿಗಮದ ಡಿಪೋ ಮ್ಯಾನೇಜರ್ ಗೀತಾ ಅವರ ಗಮನ ಸೆಳೆದ ಸಂದರ್ಭ, ತಕ್ಷಣ ದೂರವಾಣಿ ಮೂಲಕ ಸೋಮವಾರಪೇಟೆ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿಯನ್ನು ಸಂಪರ್ಕಿಸಿ ಶೌಚಾಲಯ ಅವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.

ಶೌಚಾಲಯದ ಗುಂಡಿ ತುಂಬಿರುವ ಹಿನ್ನೆಲೆ ತ್ಯಾಜ್ಯವನ್ನು ಪಟ್ಟಣ ಪಂಚಾಯಿತಿಯ ಸಕ್ಕಿಂಗ್ ಮಿಷಿನ್‍ನಿಂದ ಹೊರತೆಗೆಯಬೇಕಾಗಿದೆ. ಸಕ್ಕಿಂಗ್ ಮೆಷಿನ್ ದುರಸ್ತಿಗೀಡಾಗಿರುವ ಹಿನ್ನೆಲೆ ಗುಂಡಿಯನ್ನು ಖಾಲಿ ಮಾಡಲು ಸಾಧ್ಯವಾಗಿಲ್ಲ. ಈ ಬಗ್ಗೆ ಸಂಚಾರ ನಿಯಂತ್ರಕರಿಗೆ ಸೂಚನೆ ನೀಡಲಾಗಿದ್ದು, ಸಮಸ್ಯೆ ಬಗೆಹರಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.