ಮಡಿಕೇರಿ, ಜೂ. 19: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ವತಿಯಿಂದ ಹೃದಯಕ್ಕಾಗಿ ಯೋಗ ಎಂಬ ಘೋಷ ವಾಕ್ಯದೊಂದಿಗೆ 5ನೇ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯ ಸಭಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ತಾ. 21 ರಂದು ಬೆಳಿಗ್ಗೆ 6.50 ಗಂಟೆಗೆ ನಗರದ ಮೈತ್ರಿ ಹಾಲ್ನಲ್ಲಿ ನಡೆಯಲಿದೆ.
ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಬೆಂಗಳೂರು ಆಯುಷ್ ನಿರ್ದೇಶನಾಲಯದ ಆಯುಕ್ತೆ ಮೀನಾಕ್ಷಿ ನೇಗಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಜಿ.ಪಂ. ಸಿಇಒ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಹೆಚ್. ರಾಮಚಂದ್ರ ಇತರರು ಪಾಲ್ಗೊಳ್ಳಲಿದ್ದಾರೆ.
ವೀರಾಜಪೇಟೆ: ವೀರಾಜಪೇಟೆಯಲ್ಲಿ ತಾ. 21 ರಂದು ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಇಲ್ಲಿನ ಗುರುಕುಲಂ ಯೋಗ ತರಗತಿ ವತಿಯಿಂದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗುರುಕುಲಂ ಯೋಗ ಸಂಸ್ಥೆಯ ಪುಟ್ಟಿಚಂಡ ಬೋಪಣ್ಣ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೋಪಣ್ಣ ಅವರು ಇಲ್ಲಿನ ಕೊಡವ ಸಮಾಜದ ಬಳಿಯಿರುವ ತ್ರಿವೇಣಿ ಪ್ರೌಢಶಾಲಾ ಸಭಾಂಗಣದಲ್ಲಿ ಅಂದು ಬೆಳಿಗ್ಗೆ 7 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಮುಖ್ಯ ಅತಿಥಿಯಾಗಿ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ. ಕಾಫಿ ಮಂಡಳಿಯ ಉಪಾಧ್ಯಕ್ಷೆ ರೀನಾ ಪ್ರಕಾಶ್, ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ಪಟ್ರಪಂಡ ರಘು ನಾಣಯ್ಯ ಹಾಗೂ ಚಕ್ಕೇರ ಮನು ಭಾಗವಹಿಸಲಿದ್ದಾರೆ. ಮಾಹಿತಿಗಾಗಿ ಮೊ. 9035732938 ಸಂಪರ್ಕಿ ಸಬಹುದು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಯೋಗ ತರಬೇತುದಾರ ಪುಟ್ಟಿಚಂಡ ಬಿದ್ದಪ್ಪ ಉಪಸ್ಥಿತರಿದ್ದರು.
ಶನಿವಾರಸಂತೆ: ಯೋಗ ಬಂಧುಗಳು ಇಲ್ಲಿನ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ರೋಟರಿ ಸಂಸ್ಥೆ ಸಹಭಾಗಿತ್ವದಲ್ಲಿ 5ನೇ ವರ್ಷದ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ತಾ. 21 ರಂದು ನಡೆಯಲಿದೆ. ಯೋಗ ದಿನಾಚರಣೆ ಪ್ರಯುಕ್ತ ಪಟ್ಟಣದ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಿತ್ಯವೂ ಸ್ಥಳೀಯ ಯೋಗ ಸಮಿತಿ ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ತಾ. 18 ರಂದು ಬೆಳಿಗ್ಗೆ 5.20 ರಿಂದ 7 ಗಂಟೆಯವರೆಗೆ ಡಾ. ಆರ್.ವಿ. ಚಿದಾನಂದ್ ಅವರಿಂದ ಆಹಾರ ಪದ್ಧತಿ ಮತ್ತು ಯೋಗದ ಬಗ್ಗೆ ಅರಿವು ವಿಷಯ ಉಪನ್ಯಾಸ ಕಾರ್ಯಕ್ರಮ ನಡೆಯಿತು. ತಾ. 20 ರಂದು ಬೆಳಿಗ್ಗೆ ಬೆಂಗಳೂರಿನ ಯೋಗ ಶಿಕ್ಷಕ ಪುಟ್ಟನಂಜಪ್ಪ ಅವರಿಂದ ಧ್ಯಾನ ಮತ್ತು ಪ್ರಾಣಾಯಾಮದ ಬಗ್ಗೆ ಮಾಹಿತಿ ಕಾರ್ಯಕ್ರಮವಿದೆ.
ತಾ. 21 ರಂದು ಅಂತರ್ರಾಷ್ಟ್ರೀಯ ಯೋಗ ದಿನದ ವಿಶೇಷ ಆಚರಣೆಯಾಗಿ ಬೆಳಿಗ್ಗೆ 6.38ಕ್ಕೆ ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗಶಿವಾಚಾರ್ಯ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆ ಅಧ್ಯಕ್ಷ ಟಿ.ಆರ್. ಪುರುಷೋತ್ತಮ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮೈಸೂರಿನ ಯೋಗಾಚಾರ್ಯ ಬಿ.ಪಿ. ಮೂರ್ತಿ ಅವರು ಯೋಗಾಸನದ ಪ್ರದರ್ಶನ ಮತ್ತು ಯೋಗದ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದು ಯೋಗ ಶಿಕ್ಷಕ ಎ.ಡಿ. ಮೋಹನ್ಕುಮಾರ್ ತಿಳಿಸಿದ್ದಾರೆ.
ಕಾವೇರಿ ಯೋಗ ವೀರಾಜಪೇಟೆ: ಪಟ್ಟಣದ ಕಾವೇರಿ ಯೋಗ ಕೇಂದ್ರದ 20ನೇ ವಾರ್ಷಿಕೋತ್ಸವ, ವಿಶ್ವ ಯೋಗ ದಿನಾಚರಣೆಯು ತಾ. 21 ರಂದು ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿನ ಕಾವೇರಿ ಆಶ್ರಮದಲ್ಲಿ ಆಯೋಜಿಸಲಾಗಿದೆ ಎಂದು ಕೇಂದ್ರದ ಯೋಗ ಗುರು ಸೀತಾರಾಂ ರೈ ತಿಳಿಸಿದ್ದಾರೆ.
ತಾ. 21 ರಂದು ಬೆಳಿಗ್ಗೆ 7 ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು,
8 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಕಾವೇರಿ ಆಶ್ರಮದ ವಿವೇಕಾನಂದ ಶರಣು ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ತಹಶೀಲ್ದಾರ್ ಗೋವಿಂದರಾಜು, ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಪ್ರಕಾಶ್, ಉದ್ಯಮಿ ಪಿ. ಡಾಲು ನಾಣಯ್ಯ ಹಾಗೂ ಕಾವೇರಿ ಆಶ್ರಮದ ಸಮಿತಿಯ ಅಧ್ಯಕ್ಷ ಬಿ.ಬಿ. ನಾಣಯ್ಯ ಮತ್ತಿತರರು ಭಾಗವಹಿಸಲಿದ್ದಾರೆ.