ವೀರಾಜಪೇಟೆ, ಜೂ. 19: ಜಿಲ್ಲೆಯಲ್ಲಿ ಶೇ 75 ರಷ್ಟು ಸಣ್ಣ ರೈತರಿದ್ದು ದಿನದಿಂದ ದಿನಕ್ಕೆ ರೈತರ ಆದಾಯ ಕುಂಠಿತವಾಗುತ್ತಿದೆ. ಇದರಿಂದ ರ್ಯೆತರು ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರಕಾರ ಬಿ.ಪಿಎಲ್. ಪಡಿತರ ಸೌಲಭ್ಯ ಒದಗಿಸಬೇಕು. ರಾಜ್ಯ ಸರಕಾರ ಆದಾಯ ಮಿತಿಯನ್ನು 1,20,000 ರೂ ಗಳಿಗೆ ಏರಿಕೆ ಮಾಡಿರುವದರಿಂದ ಅನೇಕ ರೈತರು ಇದರ ಸೌಲಭ್ಯ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಅಮ್ಮತ್ತಿ ರೈತ ಸಂಘ ಈಗ ಅಮ್ಮತ್ತಿ ಹೋಬಳಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಂದ ಅರ್ಜಿ ಸ್ವೀಕಾರ ಆರಂಭಿಸಿದೆ. ಇದೇ ತಾ. 29 ರೊಳಗೆ ಫಲಾನುಭವಿಗಳು ಸಂಘಕ್ಕೆ ತಮ್ಮ ಜಮೀನಿನ ಆರ್.ಟಿ.ಸಿ ಯೊಂದಿಗೆ

ಅರ್ಜಿ ನೀಡಬಹುದು. ಜುಲೈ 1 ರಂದು ರೈತ ಸಂಘ ಅರ್ಜಿಗಳನ್ನು ಇಲಾಖೆಗೆ ನೀಡಿ ಬಿಪಿಎಲ್ ಪಡಿತರ ಚೀಟಿ ಒದಗಿಸುವ ಕೆಲಸ ಮಾಡಲಿದೆ ಎಂದು ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರಿಂದ ಬಂದ ಅರ್ಜಿಗಳನ್ನು ತಾಲೂಕು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಮುಂದಿಟ್ಟು ಬಿ.ಪಿ.ಎಲ್ ಚೀಟಿ ನೀಡಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವದು. ಇದರಿಂದ ಕೊಡಗಿನ ಸಣ್ಣ ರೈತರಿಗೆ ಇಂದಿನ ಆರ್ಥಿಕ ದುಸ್ಥಿತಿಯಲ್ಲಿಯೂ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಂಘದ ಖಜಾಂಚಿ ಪಿ.ಬಿ.ಚಂಗಪ್ಪ ಮಾತನಾಡಿ, ಸಣ್ಣ ರೈತರಿಗೆ ಬಿ.ಪಿ.ಎಲ್ ಪಡಿತರ ಚೀಟಿ ಅತ್ಯಗತ್ಯ. ರ್ಯೆತರು ತೀವ್ರ ಅರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ವಾರ್ಷಿಕ ಆದಾಯ ಕುಸಿಯುತ್ತಿದ್ದು ಕೃಷಿಯನ್ನೇ ತೊರೆಯುವ ಪರಿಸ್ಥಿತಿ ಎದುರಾಗಿದೆ. ಕಾಫಿ ಮತ್ತು ಕರಿಮೆಣಸಿನ ಧಾರಣೆ ಕುಸಿಯುತ್ತಿದೆ. ಈ ದಿಸೆಯಲ್ಲಿ ಬಿ.ಪಿ.ಎಲ್ ಪಡಿತರ ಚೀಟಿ ದೊರೆಯುವಂತೆ ರೈತ ಸಂಘ ಮಾಡಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಜಿ. ಗೌತಮ್ ಪೊನ್ನಪ್ಪ, ಉಪಾಧ್ಯಕ್ಷ ಕೆ.ಎನ್.ಚಿಣ್ಣಪ್ಪ ಮತ್ತು ಸದಸ್ಯ ಕೇಚಂಡ ಕುಶಾಲಪ್ಪ ಉಪಸ್ಥಿತರಿದ್ದರು.