ಮಡಿಕೇರಿ, ಜೂ. 18: ಪ್ರತಿ ವರ್ಷದಂತೆ ಈ ಬಾರಿಯು ನಗರಸಭೆ ಅಪಾಯದಂಚಿನಲ್ಲಿರುವ ಮನೆಗಳಿಂದ ಸ್ಥಳಾಂತರಗೊಳ್ಳುವಂತೆ ಸುಮಾರು ಇಪ್ಪತ್ತೈದು ಕುಟುಂಬಗಳಿಗೆ ನೋಟೀಸ್ ಜಾರಿ ಮಾಡಿದೆ.

ಮಳೆಗಾಲದ ಸಂದರ್ಭ ಅತೀ ಹೆಚ್ಚು ಹಾನಿಗೊಳಗಾಗುವ ಮಂಗಳಾ ದೇವಿನಗರ, ಚಾಮುಂಡೇಶ್ವರಿನಗರ ಹಾಗೂ ಇಂದಿರಾನಗರದಲ್ಲಿ ಪ್ರತೀ ಬಾರಿ ಮಳೆಗಾಲದ ವೇಳೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಗೊಳ್ಳುವಂತೆ ನಗರಸಭೆ ನೋಟೀಸ್ ಜಾರಿ ಮಾಡುತ್ತದೆ. ಅದರಂತೆ ಈ ಬಾರಿಯೂ ನೋಟೀಸ್ ನೀಡಲಾಗಿದೆ. ಪ್ರತಿ ವರ್ಷ ಬಹುಪಾಲು ಮನೆಗಳಿಗೆ ನೋಟೀಸ್ ಜಾರಿಗೊಳಿಸಲಾಗುತಿತ್ತಾದರೂ ಪ್ರಸಕ್ತ ವರ್ಷ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗಳಿಗೆ ಮಾತ್ರ ನೋಟೀಸ್ ನೀಡಲಾಗಿದೆ. ಈ ಬಾರಿ ಮಳೆಯ ಪ್ರಮಾಣವೂ ಕಡಿಮೆಯಾಗಿರುವದರಿಂದ ಮುಂದಿನ ಬೆಳವಣಿಗೆಯನ್ನು ಗಮನಿಸಿ ಆ ನಂತರ ಸ್ಥಳಾಂತರಗೊಳ್ಳಬೇಕಾದ ಅನಿವಾರ್ಯತೆ ಇರುವ ಎಲ್ಲಾ ಮನೆಗಳಿಗೂ ನೋಟೀಸ್ ನೀಡಲು ನಗರಸಭೆ ನಿರ್ಧರಿಸಿದೆ.

ನಗರಸಭೆ ನೋಟೀಸ್ ಜಾರಿ ಮಾಡಿದೆ. ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಸ್ಥಳಾಂತರಗೊಳ್ಳುವಂತೆ ಸೂಚಿಸಿದ್ದು, ಹೋಗುವದಾದರೂ ಎಲ್ಲಿಗೆ? ಎಂದು ನೋಟೀಸ್ ಪಡೆದ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಬಾಡಿಗೆ ಮನೆಯೂ ಸಿಗುತಿಲ್ಲ. ಹೀಗಿರುವಾಗ ಎಲ್ಲಿ ಹೋಗಿ ನೆಲೆಸುವದೆಂದು ಆತಂಕಗೊಂಡಿದ್ದಾರೆ.

ಜಿಲ್ಲಾಧಿಕಾರಿ ಪ್ರತಿಕ್ರಿಯೆ

ಈ ಕುರಿತು ‘ಶಕ್ತಿ’ಗೆ ಪ್ರತಿಕ್ರಿಯಿಸಿ ರುವ ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಅವರು ಈಗಾಗಲೇ ಮನೆ ಹಾನಿಯಾದವರಿಗೆ ಸರಕಾರದಿಂದ ಬಾಡಿಗೆ ಪಾವತಿಸಲಾಗುತ್ತಿದ್ದು, ಬಾಡಿಗೆ ಹಣ ಪಡೆಯುತ್ತಿರುವವರು ಅಪಾಯದಂಚಿನಲ್ಲಿರುವ ತಮ್ಮ ಮನೆಗಳನ್ನು ಬಿಟ್ಟು ಬೇರೆಡೆ ಬಾಡಿಗೆ ಮನೆ ಪಡೆದು ನೆಲೆಸಬೇಕು. ಬಾಡಿಗೆ ಹಣ ಸಿಗದಿದ್ದರೂ ಅಪಾಯದಂಚಿ ನಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ತಾತ್ಕಾಲಿಕವಾಗಿ ತಂಗಲು ಜಿಲ್ಲಾಡಳಿತ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದ್ದಾರೆ.