ಮಡಿಕೇರಿ, ಜೂ. 18: ಪ್ರವಾಸಿ ತಾಣ ದುಬಾರೆಯ ಕಾವೇರಿ ನದಿಯಲ್ಲಿ ನಡೆಸಲಾಗುವ ರ್ಯಾಫ್ಟಿಂಗ್ ಜಲ ಸಾಹಸ ಕ್ರೀಡೆಯನ್ನು ಅರಣ್ಯ ಇಲಾಖೆಗೆ ವಹಿಸುವಂತೆ ಮಾಜಿ ಸಚಿವ ಯಂ.ಸಿ. ನಾಣಯ್ಯ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ದುಬಾರೆಯಲ್ಲಿ ಅಪಾಯಕಾರಿ ಪೈಪೋಟಿಯೊಂದಿಗೆ ರ್ಯಾಫ್ಟಿಂಗ್ ಕ್ರೀಡೆ ನಡೆಸಲಾಗುತ್ತಿದ್ದು, ಪ್ರವಾಸಿಗರಿಂದ ಸುಲಿಗೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಹಿಂದಿನ ಜಿಲ್ಲಾಧಿಕಾರಿಗಳಾದ ಮೀರ್ ಅನೀಸ್ ಅಹ್ಮದ್ ಹಾಗೂ ಅನುರಾಗ್ ತಿವಾರಿ ಅವರುಗಳಿಗೆ ಪತ್ರ ಬರೆದಿದ್ದೆ, ಅಲ್ಲದೆ ತಾನೂ ಕೂಡ ಖುದ್ದಾಗಿ ಪರಿಶೀಲಿಸಿದ್ದು, ಈ ಬಗ್ಗೆ ಈ ಹಿಂದೆ ‘ಶಕ್ತಿ’ಯಲ್ಲಿ ಪ್ರಕಟಗೊಂಡ ವರದಿಯನ್ನು ಕೂಡ ಲಗತ್ತಿಸಿದ್ದು, ಇದೀಗ ಮತ್ತೆ ಪತ್ರಿಕೆಯ ಮಾಹಿತಿಯೊಂದಿಗೆ ಸಂಬಂಧಿಸಿದ ದಾಖಲೆಗಳ ಸಹಿತ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಪತ್ರ ಬರೆದಿದ್ದಾರೆ. ಈ ಕ್ರೀಡೆಯನ್ನು ಅರಣ್ಯ ಇಲಾಖೆಯ ಜಂಗಲ್ ಲಾಡ್ಜ್ ಸಂಸ್ಥೆ ಮೂಲಕ ನಡೆಸುವಂತಾಗಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.