ವೀರಾಜಪೇಟೆ: ಗಿಡಗಳನ್ನು ನೆಟ್ಟರೆ ಸಾಲದು ಅದನ್ನು ಉಳಿಸಿ ಬೆಳೆಸುವದು, ಅರಣ್ಯವನ್ನು ಸಂರಕ್ಷಣೆ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಇಲ್ಲಿನ ಸಮುಚ್ಚಯ ನ್ಯಾಯಾಲಯಗಳ ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾÀನಂದ್ ಲಕ್ಷ್ಮಣ ಅಂಚಿ ಹೇಳಿದರು
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ವೀರಾಜಪೇಟೆಯ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರ ಬಳಿಯ ದಿಡ್ಡಳ್ಳಿ ಅರಣ್ಯ ವಲಯದಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಿತಿಮತಿ ವಲಯ ಅರಣ್ಯಧಿಕಾರಿ ಅಶೋಕ್, ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕೆ.ಪಿ. ಗೋಪಾಲ ಇವರುಗಳು ಹಾಜರಿದ್ದರು. ಈ ಸಂದರ್ಭ ದಿಡ್ಡಳ್ಳಿ ಆಶ್ರಮ ಶಾಲಾ ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು.ಸುಂಟಿಕೊಪ್ಪ: ಸುಂಟಿಕೊಪ್ಪ ಸರಕಾರಿ ಪದವಿ ಕಾಲೇಜು ಹಾಗೂ ವನಸುಮ ಇಕೋಕ್ಲಬ್,ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಕಾಲೇಜಿನ ಆವರಣದಲ್ಲಿ ಪರಿಸರ ದಿನಾಚರಣೆಯ ಸಮಾರಂಭದಲ್ಲಿ ನಡೆಯಿತು. ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಮಾತನಾಡಿ, ಪರಿಸರ ದಿನ ಗಿಡಗಳನ್ನು ನೆಡುವದಕ್ಕೆ ಮಾತ್ರ ಸೀಮಿತವಾಗಬಾರದು. ಆ ಗಿಡಗಳನ್ನು ಬೆಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೈ.ಎಂ. ಕರುಂಬಯ್ಯ ಮಾತನಾಡಿ, ಪರಿಸರವನ್ನು ಹಾನಿಗೊಳಿಸಿದ್ದಲ್ಲಿ ಪ್ರಕೃತಿ ಆಸಮತೋಲನೆಗೊಳ್ಳಲಿದೆ ಎಂದರು. ವಿಜ್ಞಾನ ಪರಿಷತ್ ಸಂಚಾಲಕ ಟಿ.ಜಿ. ಪ್ರೇಮ್‍ಕುಮಾರ್ ಮಾತನಾಡಿ, ಜೀವ ಸಂಕುಲಗಳ ಸಂರಕ್ಷಣೆಗೆ ಹೆಚ್ಚು ಕಾಳಜಿ ವಹಿಸಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಪಿ. ಜಾನ್ ವಹಿಸಿ ಮಾತನಾಡಿದರು. ಜಿಲ್ಲಾ ವಿಜ್ಞಾನ ಪರಿಷತ್ ಅಧ್ಯಕ್ಷ ಫಿಲಿಪ್‍ವಾಸ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಪಟ್ಟಣದ ಮುಖ್ಯ ಬೀದಿಗಳಲ್ಲಿ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರಿಸರ ಜಾಗೃತಿ ಜಾಥಾ ನಡೆಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆರ್. ರಮೇಶ್ ಪಿಳ್ಳೆ, ವನಸುಮ ಇಕೋ ಕ್ಲಬ್ ಕಾಲೇಜು ಸಂಚಾಲಕ ಈಶ, ಉಪನ್ಯಾಸಕರು ಇದ್ದರು.