ಮಡಿಕೇರಿ, ಜೂ. 18: ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಡಳಿತ ಮಂಡಳಿಯ ಸಭೆಯು ಅಧ್ಯಕ್ಷ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲುವಿನ ಸಂಘದ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ತಾ. 22 ರಂದು ಸಂಘದ ಕಚೇರಿಯಲ್ಲಿ ಗೋಣಿಕೊಪ್ಪಲು ಪ್ರೆಸ್ ಕ್ಲಬ್ ಸಹಯೋಗದಲ್ಲಿ ‘ಗೋಣಿಕೊಪ್ಪಲುವಿನ ಕಸದ ವಿಲೇವಾರಿ ಹಾಗೂ ಬಸ್ಸ್ ನಿಲ್ದಾಣದ ಸಮಸ್ಯೆ’ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಂವಾದ ನಡೆಸಲು ತೀರ್ಮಾನಿಸಲಾಯಿತು.
ವೀರಾಜಪೇಟೆ ಪಟ್ಟಣದ ಸಮಸ್ಯೆಗಳ ಬಗ್ಗೆ ತಹಶೀಲ್ದಾರರು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವೀರಾಜಪೇಟೆ ಪ್ರೆಸ್ ಕ್ಲಬ್ ಸಹಯೋಗದಲ್ಲಿ ತಾ.26 ರಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸಂವಾದ ಏರ್ಪಡಿಸಲು ತೀರ್ಮಾನ ಕೈಗೊಳ್ಳಲಾಯಿತು.
ಪತ್ರಿಕಾ ದಿನಾಚರಣೆಯ ಅಂಗವಾಗಿ ಜುಲೈ 4 ರಂದು ವೀರಾಜಪೇಟೆಯ ಕಾವೇರಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ‘ಆಶುಭಾಷಣ’ ಸ್ಪರ್ಧೆ ಹಾಗೂ ಚಿಕ್ಕ ಆಳುವಾರು ಸ್ನಾತಕೋತ್ತರ ಕೇಂದ್ರದ ಉಪಾನ್ಯಾಸಕ ಜಮೀರ್ ಅಹಮ್ಮದ್ ಅವರಿಂದ ಪತ್ರಿಕೋದ್ಯಮ ವಿಷಯದಲ್ಲಿ ಉಪಾನ್ಯಾಸದ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ಜುಲೈ 10 ರಂದು ಸಂಘದ ಕಚೇರಿಯಲ್ಲಿ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳುವ ಬಗ್ಗೆ ಹಾಗೂ ವಾರ್ಷಿಕ ಪ್ರಶಸ್ತಿ ವಿತರಣೆ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಪ್ರಸಕ್ತ ಸಾಲಿನ ಪತ್ರಕರ್ತರ ಜಿಲ್ಲಾ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟವನ್ನು ಪಾಲಿಬೆಟ್ಟದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಸಂಘದ ನಿರ್ದೇಶಕ ಕುಟ್ಟಂಡ ಅಜಿತ್ ಕರುಂಬಯ್ಯ ಅವರ ಗದ್ದೆಯಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳುವದು ಮತ್ತು ಕ್ರೀಡಾಕೂಟದಲ್ಲಿ ಪತ್ರಕರ್ತರಿಗೆ ಕೆಸರು ಗದ್ದೆ ಓಟ, ಹ್ಯಾಂಡ್ ಬಾಲ್, ಹಗ್ಗಜಗ್ಗಾಟ ಸ್ಪರ್ಧೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ತಾಲೂಕು ಪತ್ರಕರ್ತರ ಸಂಘದ ತೆರವಾದ ನಿರ್ದೇಶಕ ಸ್ಥಾನಕ್ಕೆ ಟಿ.ಶೆಟ್ಟಿಗೇರಿಯ ಡಿ.ನಾಗೇಶ್ ಅವರನ್ನು ಆಯ್ಕೆಗೊಳಿಸಲಾಯಿತು. ಸಂಘದ ವಿವಿಧ ಕಾರ್ಯಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಸಂಘದ ಪದಾಧಿಕಾರಿಗಳು, ನಿರ್ದೇಶಕರು, ರಾಜ್ಯ ಸಂಘದ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿಲ್ಲಾ ಸಂಘದ ಕಾರ್ಯದರ್ಶಿ ಹೆಚ್.ಕೆ. ಜಗದೀಶ್, ನಿರ್ದೇಶಕ ಕುಪ್ಪಂಡ ದತ್ತಾತ್ರಿ ಸಭೆಯಲ್ಲಿ ಇದ್ದರು.
ಪ್ರಶಸ್ತಿಗೆ ಅರ್ಜಿ ಆಹ್ವಾನ
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ವಾರ್ಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ತಾ. 27 ರ ಒಳಗಾಗಿ ಅರ್ಜಿ ಸಲ್ಲಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಸಮಿತಿ ಸದಸ್ಯ ಎಸ್.ಎ. ಮುರುಳಿಧರ್ ತಮ್ಮ ಸಹೋದರ ಗಣೇಶ್ ಜ್ಞಾಪಕಾರ್ಥವಾಗಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿ, ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ ತಮ್ಮ ಸೋದರ ಮಾವಂದಿರಾದ ದೇಯಂಡ ಪೂಣಚ್ಚ ಹಾಗೂ ಉಮೇಶ್ ಜ್ಞಾಪಕಾರ್ಥವಾಗಿ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ ಮತ್ತು ವೀರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಸಣ್ಣುವಂಡ ಶ್ರೀನಿವಾಸ್ ಚಂಗಪ್ಪ ತಮ್ಮ ತಂದೆ ಸಣ್ಣುವಂಡ ಮಾದಪ್ಪ ಹಾಗೂ ತಾಯಿ ಜಾನಕಿ ಅವರ ಜ್ಞಾಪಕಾರ್ಥವಾಗಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ಕುರಿತ ವರದಿಗೆ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, 2018 ನೇ ಸಾಲಿನ ವರದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.