ಮಡಿಕೇರಿ, ಜೂ. 18: ಹದಿನಾಲ್ಕು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವಂತಾಗಬೇಕು. ಇದರಿಂದ ಉತ್ತಮ ಪ್ರಜೆಯನ್ನಾಗಿ ರೂಪಿಸಬಹುದು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನಿಸ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಪೋಲಿಸ್, ನಗರಸಭೆ, ಸಾರ್ವಜನಿಕ ಶಿಕ್ಷಣ, ಪದವಿಪೂರ್ವ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ ಇಲಾಖೆ, ವಕೀಲರ ಸಂಘ, ಕೊಡಗು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಹಾಗೂ ಸರ್ಕಾರೇತರ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾ ಚರಣೆ ಪ್ರಯುಕ್ತ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣ ಎನ್ನುವದು ಒಂದು ಪ್ರಮುಖ ಅಸ್ತ್ರವಾಗಿದೆ. ಎಲ್ಲಾ ಮಕ್ಕಳು ಶಿಕ್ಷಣವಂತರಾದರೆ ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯ. ಈ ದಿಕ್ಕಿನಲ್ಲಿ ಸರ್ಕಾರ ಮಕ್ಕಳ ಶಿಕ್ಷಣಕ್ಕೆ ಹಲವು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೊಳಿಸಿದೆ ಎಂದರು.
ಯಾವದೇ ಕಾರಣಕ್ಕೂ ದುಡಿಮೆಗೆ ದೂಡಬಾರದು. ಮಕ್ಕಳನ್ನು ದುಡಿಮೆಗೆ ದೂಡುವದು ಮತ್ತು ಒತ್ತಡ ಹೇರುವುದು ಸರಿಯಲ್ಲ. ಮಕ್ಕಳ ಕನಸನ್ನು ಪೋಷಿಸಬೇಕು ಎಂದು ಅವರು ತಿಳಿಸಿದರು.
ಬಾಲ ಕಾರ್ಮಿಕರನ್ನು ತೊಡಗಿಸಿಕೊಂಡು ತಯಾರಿಸಿದ ಯಾವದೇ ವಸ್ತುವನ್ನು ಉಪಯೋಗಿ ಸುವದಿಲ್ಲ. ಹಾಗೂ ಬಾಲ ಕಾರ್ಮಿಕರ ಸೇವೆಯನ್ನು ಪಡೆಯುವದಿಲ್ಲ ಹಾಗೂ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಕ್ರಮವನ್ನು ತೆಗೆದುಕೊಳ್ಳುತ್ತೇನೆಂದು ಈ ದಿನದಂದು ಪ್ರಮಾಣ ಮಾಡುತ್ತೇನೆ ಎಂದು ಉಪ ವಿಭಾಗಾಧಿಕಾರಿ ಟಿ. ಜವರೇಗೌಡ ಅವರು ಪ್ರಮಾಣವಚನ ಬೋಧಿಸಿದರು.
ವಕೀಲ ಎಂ.ಎ. ನಿರಂಜನ ಮಾತನಾಡಿ, ಬಾಲ ಕಾರ್ಮಿಕ ಕಾಯ್ದೆ (ನಿಷೇಧ ಮತ್ತು ನಿಯಂತ್ರಣ ಕಾಯ್ದೆ 1986 ಹಾಗೂ 2016ರ) ತಿದ್ದುಪಡಿ ಕಾಯ್ದೆ ಅನ್ವಯ ಬಾಲ ಕಾರ್ಮಿಕರಿಂದ ದುಡಿಸಿಕೊಂಡವರು/ ನೇಮಿಸಿ ಕೊಂಡವರು 6 ತಿಂಗಳಿಂದ 3 ವರ್ಷದವರೆಗೆ ಸೆರೆವಾಸ ಮತ್ತು ರೂ. 20 ಸಾವಿರದಿಂದ 50 ಸಾವಿರದವರೆಗೆ ದಂಡ ವಿಧಿಸಲಾಗುವದು ಎಂದರು. ಮಕ್ಕಳು ದೇಶದ ಆಸ್ತಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ದೇಶದ ಅಭಿವೃದ್ಧಿಯಲ್ಲಿ ಮಕ್ಕಳ ಸ್ಥಿತಿಗತಿಗಳು ಸಹ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ರಾಮಕೃಷ್ಣ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಹೋಗಲಾಡಿಸಲು ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಸಹ ಶ್ರಮಿಸುತ್ತಿದ್ದು, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಪ್ರತಿ ವರ್ಷವು ಒಂದು ಘೋಷ ವಾಕ್ಯದೊಂದಿಗೆ ವಿಶ್ವ ಬಾಲಕಾರ್ಮಿಕ ದಿನವನ್ನು ಆಚರಿಸುತ್ತಿದೆ. ಅದರಂತೆ 2019ರ ಘೋಷ ವಾಕ್ಯ, ‘ಮಕ್ಕಳು ದುಡಿಯಬೇಕಾದದ್ದು ಅವರ ಕನಸುಗಳ ಮೇಲೆ ಹೊರತು ಕ್ಷೇತ್ರದಲ್ಲಿ ಅಲ್ಲ’ ಎಂಬ ಘೋಷ ವಾಕ್ಯದೊಂದಿಗೆ ಈ ವರ್ಷದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಆಚರಿಸುತ್ತಿದ್ದೇವೆ ಎಂದರು.
ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ಮಾತನಾಡಿದರು. ಒಡಿಪಿ ಸಂಸ್ಥೆಯ ಜಾಯ್ಸ್ ಮೆನೇಜಸ್, ಇತರರು ಇದ್ದರು. ತಾಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ ಸ್ವಾಗತಿಸಿದರು, ಜಯಪ್ಪ ನಿರೂಪಿಸಿದರು, ಸಂತ ಮೈಕಲರ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು, ಮಹಮ್ಮದ್ ಶಿರಾಜ್ ಅವರು ವಂದಿಸಿದರು.