ಮಡಿಕೇರಿ, ಜೂ. 17: ಅಕ್ರಮವಾಗಿ ಮಿಲ್‍ಗೆ ಸಾಗಾಟವಾಗುತ್ತಿದ್ದ ಮರಗಳನ್ನು ಲಾರಿ ಸಹಿತ ವಶಪಡಿಸಿಕೊಂಡಿರುವ ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿಗಳು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈಚೆಗೆ ಸುಂಟಿಕೊಪ್ಪ ಸಮೀಪ ಬೋಯಿಕೇರಿ ಹೊರೂರು ವ್ಯಾಪ್ತಿಯ ತೋಟವೊಂದರಿಂದ ಮರಗಳನ್ನು ಸಾಗಿಸುತ್ತಿರುವ ಮಾಹಿತಿ ದೊರೆತ ಹಿನ್ನೆಲೆ; ಡಿಸಿಐಬಿ ಮತ್ತು ಕುಶಾಲನಗರ ಪೊಲೀಸರು ಮುಳ್ಳುಸೋಗೆ ಮಿಲ್‍ಗೆ ದಾಳಿ ಮಾಡಿದ್ದಾರೆ. ಈ ಸಂದರ್ಭ ಆರೋಪಿಗಳಾದ ಮುಳ್ಳುಸೋಗೆಯ ನಿಜಾಮುದ್ದಿನ್, ಚಾಲಕ ಹೊಸಕೋಟೆಯ ಹಂಸ, ಕೊಪ್ಪ ಗ್ರಾಮದ ನಿವಾಸಿ ಲತೀಫ್ ಮತ್ತು ಮಹಮ್ಮದ್ ಅಲಿ ಎಂಬವರನ್ನು ಬಂಧಿಸಿದ್ದಾರೆ. ಮರ ತುಂಬಿದ್ದ ಲಾರಿಯನ್ನು (ಕೆ.ಎ. 12. ಬಿ. 3079) ವಶಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾರ್ಗದರ್ಶನದಲ್ಲಿ ಡಿಸಿಐಬಿ ಇನ್ಸ್‍ಪೆಕ್ಟರ್ ನಾಗೇಶ್, ವೃತ್ತ ನಿರೀಕ್ಷಕ ದಿನೇಶ್‍ಕುಮಾರ್ ನೇತೃತ್ವದಲ್ಲಿ ಕುಶಾಲನಗರ ಠಾಣಾಧಿಕಾರಿ ಪಿ. ಜಗದೀಶ್ ಹಾಗೂ ಡಿಸಿಐಬಿಯ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಹಮೀದ್ ಮತ್ತು ಸಿಬ್ಬಂದಿ ವೆಂಕಟೇಶ್, ಯೋಗೀಶ್, ನಿರಂಜನ್, ಅನಿಲ್, ವಸಂತ್ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.