ಕೂಡಿಗೆ, ಜೂ. 15 : ಕೂಡಿಗೆಯ ಸರ್ಕಾರಿ ಕ್ರೀಡಾ ಪ್ರೌಢಶಾಲೆಯಲ್ಲಿ ನಡೆದ ಯುವ ಸಬಲೀಕರಣ ಮತ್ತು ಇಲಾಖೆಯ ಎಂಟು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ ಅವರು ಕೂಡಿಗೆ ಕ್ರೀಡಾ ಶಾಲೆಗೆ ಭೇಟಿ ನೀಡಿ, ಕ್ರೀಡಾಶಾಲೆಯ ಒಳಾಂಗಣ ಮತ್ತು ಹೊರ ಕ್ರೀಡಾಂಗಣ, ಹಾಕಿ ಟರ್ಫ್, ಅಥ್ಲೆಟಿಕ್ ಟ್ರ್ಯಾಕ್ ಅನ್ನು ವೀಕ್ಷಿಸಿದರು. ನಂತರ ಅವರು ಹಿರಿಯ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣದ ಜಾಗ, ಬಾಲಕಿಯರ ವಸತಿ ನಿಲಯ, ಕ್ರೀಡಾಶಾಲೆಯನ್ನು ಸಂಪೂರ್ಣವಾಗಿ ವೀಕ್ಷಿಸಿದರು. ಬಾಲಕಿಯರ ವಸತಿ ನಿಲಯವನ್ನು ವಿಸ್ತರಿಸಿ, ಕ್ರೀಡಾಶಾಲೆಯನ್ನು ಪುನರ್ ನವೀಕರಣ ಮಾಡಲು ಹಾಗೂ ಕ್ರೀಡಾ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿ ಗೊಳಿಸಲು ಇಲಾಖೆ ವತಿಯಿಂದ ರೂ.1 ಕೋಟಿ ಹಣವನ್ನು ಮಂಜೂರು ಮಾಡಿರುವ ಬಗ್ಗೆ ತಿಳಿಸಿ, ಆದಷ್ಟು ಬೇಗ ಕಾಮಗಾರಿಯನ್ನು ಕೈಗೊಳ್ಳು ವಂತೆ ಅಧಿಕಾರಿಗಳಿಗೆ ತಿಳಿಸಿದರು.

ಕ್ರೀಡಾಶಾಲೆಯ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ತೆರಳಿ ವಿದ್ಯಾರ್ಥಿಗಳ ಕುಶಲೋಪರಿ ವಿಚಾರಿಸಿದರು. ಸಮಸ್ಯೆಗಳು ಹಾಗೂ ಆಗಬೇಕಾಗಿರುವ ವ್ಯವಸ್ಥೆಗಳ ಬಗ್ಗೆ ವಿದ್ಯಾರ್ಥಿಗಳಿಂದ ಸಮರ್ಪಕ ಮಾಹಿತಿ ಪಡೆದು, ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಇಲ್ಲಿಗೆ ಆಗಬೇಕಾಗಿರುವ ಸೌಕರ್ಯಗಳನ್ನು ಕಲ್ಪಿಸಿಕೊಡುವ ಭರವಸೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಜಿ. ಕಲ್ಪನಾ ಅವರು, ರಾಜ್ಯ ಇಲಾಖೆ ವತಿಯಿಂದ ಜಿಲ್ಲೆಯ ವೀರಾಜಪೇಟೆಯ ಕ್ರೀಡಾಶಾಲೆಗೆ

(ಮೊದಲ ಪುಟದಿಂದ) ಒಳಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ. ಕೂಡಿಗೆಯ ಸಿಂಥೆಟಿಕ್ ಟ್ರ್ಯಾಕ್, ಹಾಕಿ ಟರ್ಫ್ ಕಾಮಗಾರಿಗೆ ಹಣವನ್ನು ಮಂಜೂರು ಮಾಡಲಾಗಿದೆ. ಸೋಮವಾರಪೇಟೆ ಜೂನಿಯರ್ ಕಾಲೇಜಿನ ಆವರಣದಲ್ಲಿ ಹಾಕಿ ಟರ್ಫ್ ಅಳವಡಿಕೆಗೆ ಆದೇಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕ್ರೀಡಾಭಿವೃದ್ಧಿಗೆ ಹೆಚ್ಚು ಅನುದಾನ ನೀಡುವ ಮೂಲಕ ಕ್ರೀಡೆಗೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಾಗುವದು ಎಂದು ತಿಳಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ್, ಜಂಟಿ ನಿರ್ದೇಶಕ ಸುಭಾಷ್, ಉಪ ನಿರ್ದೇಶಕರಾದ ಡಾ. ಜಿತೇಂದ್ರಶೆಟ್ಟಿ, ಸತೀಶ್ ಸಜನ್‍ನವರ್, ರಮೇಶ್ ಮತ್ತು ಎಂಟು ಜಿಲ್ಲೆಗಳ ಸಹಾಯಕ ನಿರ್ದೇಶಕರು, ಎಂಟು ಜಿಲ್ಲೆಗಳ ಯುವ ಸ್ಪಂದನ ಸಂಸ್ಥೆಯ ಸಂಯೋಜಕರು ಹಾಗೂ ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಮುಖ್ಯೋಪಾ ದ್ಯಾಯಿನಿ ಕುಂತಿಬೋಪಯ್ಯ ಇದ್ದರು.