ಆಲೂರುಸಿದ್ದಾಪುರ, ಜೂ. 15: ‘ಜಠಿಲಗೊಳ್ಳುತ್ತಿರುವ ಕಸವಿಲೇವಾರಿ ಸಮಸ್ಯೆ’ ಎಂಬ ಶಿರ್ಷಿಕೆಯಡಿಯಲ್ಲಿ ಬುಧವಾರ ಪ್ರಕಟಗೊಂಡ ವರದಿಗೆ ಸ್ಪಂದಿಸಿದ ಶನಿವಾರಸಂತೆ ಗ್ರಾಮಪಂಚಾಯ್ತಿ ರಸ್ತೆಯ ಸಮೀಪಕ್ಕೆ ಬರುತ್ತಿದ್ದ ಕಸವನ್ನು ಇಟಾಚಿ ಮೂಲಕ ಅವೈಜ್ಞಾನಿಕ ರೀತಿಯಲ್ಲಿ ಸುರಿಯುತ್ತಿದ್ದ ಸ್ಥಳದಲ್ಲಿ ದೊಡ್ಡಗುಂಡಿಯನ್ನು ನಿರ್ಮಿಸಿ ಅದರೊಳಗೆ ಎಲ್ಲ ರೀತಿಯ ಕಸವನ್ನು ತುಂಬಿಸಲಾಯಿತು. ಇದರಿಂದ ಸಮುದಾಯ ಆರೋಗ್ಯಕೇಂದ್ರಕ್ಕೆ ಬರುವ ಸಾರ್ವಜನಿಕರು, ಪಾದಚಾರಿಗಳು ಹಾಗೂ ಸ್ಥಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಮತ್ತು ಉರ್ದು ಶಾಲೆಯ ವಿದ್ಯಾರ್ಥಿಗಳು ಒಂದಷ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಾಂತಾಗಿದೆ.
ಇದೀಗ ತಾತ್ಕಾಲಿಕ ಕಸಕ್ಕೆ ಮುಕ್ತಿ ಸಿಕ್ಕಿದ್ದು ಮುಂದೆ ಸಮಸ್ಯೆ ಕಟ್ಟಿಟ್ಟ ಬುತ್ತಿಯಾಗಿರುವದರಿಂದ ಈ ಅವಧಿಯಲ್ಲಾದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಸಮಸ್ಯೆಗೆ ಖಾಯಂ ಮುಕ್ತಿ ದೊರಕಿಸಿಕೊಟ್ಟಲ್ಲಿ ಶನಿವಾರಸಂತೆಗೆ ಬರುವ ಸ್ಥಳಿಯರು ಸಂಪೂರ್ಣ ನೆಮ್ಮದಿಯಾಗಿರುತ್ತಾರೆ. ಇಲ್ಲವಾದಲ್ಲಿ ಪ್ರತಿ ಗ್ರಾಮಪಂಚಾಯ್ತಿ ಸಭೆಯಲ್ಲೂ ಕಸದ ಸಮಸ್ಯೆಯೇ ಸಭೆಯನ್ನು ನುಂಗಿ ಹಾಕಲಿದೆ.