ಮಡಿಕೇರಿ, ಜೂ. 14: ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಇಕೊ ಕ್ಲಬ್ ‘ವೃಕ್ಷಕ್ರಾಂತಿ’ ಎಂಬ ಹೊಸ ಯೋಜನೆಯಡಿ ಅಳಿವಿನಂಚಿ ನಲ್ಲಿರುವ ಕಾಡುಹಣ್ಣಿನ ಮರಗಳ ಬೀಜಗಳನ್ನು ಸಂಗ್ರಹಿಸಿ ಬಿತ್ತುವ ಮೂಲಕ ಹಣ್ಣಿನ ಅರಣ್ಯ ಸೃಷ್ಟಿಸುವ ಕಾರ್ಯಕ್ಕೆ ಕೈ ಹಾಕಿದೆ. ಇದಕ್ಕಾಗಿ ಶಾಲೆಯಲ್ಲಿ ಬೀಜ ಭಂಡಾರ ಮತ್ತು ಸಸಿ ದಾಸೋಹ ಕೇಂದ್ರ ಸ್ಥಾಪಿಸ ಲಾಗಿದೆ, ಈ ಕುರಿತು ಪ್ರತಿಕ್ರಿಯಿಸಿದ ಇಕೋ ಕ್ಲಬ್ ಅರಣ್ಯ ಪ್ರದೇಶಗಳಲ್ಲಿ ನೀಲಿಗಿರಿ ಅಕೇಶಿಯದಂತಹ ಮರಗಳೇ ಹೆಚ್ಚಾಗಿವೆ.

ಇವು ಅತಿಯಾದ ಬೋಗ ಹೀರುವ ಮರಗಳಾಗಿದ್ದು ಇವುಗಳ ಬುಡದಲ್ಲಿ ಇತರೆ ಗಿಡಗಂಟೆಗಳು ಬೆಳೆಯಲಾರವು.ಇವು ಅಂತರ್ಜಲ ಕಡಿಮೆ ಆಗಲು ಕೂಡ ಕಾರಣ ವಾಗುತ್ತಿದೆ. ಬೀಟೆ, ತೇಗ, ನಂದಿ ಇಂತಹ ವಾಣಿಜ್ಯ ಉದ್ದೇಶದ ಮರಗಳನ್ನು ಹೆಚ್ಚಾಗಿ ಬೆಳೆಸಲಾಗುತ್ತಿದೆ ಇವುಗಳ ಬದಲಾಗಿ ಸ್ವಾಭಾವಿಕವಾಗಿ ಬೆಳೆಯುವಂತಹ ಕಾಡುಹಣ್ಣಿನ ಮರಗಳನ್ನು ಬೆಳೆಸುವದರಿಂದ ಪರೋಕ್ಷವಾಗಿ ಇದು ತನ್ಮೂಲಕ ಕಾಡುಗಳನ್ನು ವೃದ್ಧಿಸುತ್ತಾ ಹೋಗುತ್ತದೆ. ಈ ಹಣ್ಣಿನ ಮರಗಳು ಸ್ವಾಭಾವಿಕವಾಗಿ ಪರಿಸರ ಸಮತೋಲನವನ್ನು ಕಾಪಾಡಿಕೊಂಡು ಬರುವಂತಹ ಗುಣಗಳನ್ನು ಹೊಂದಿವೆ. ಸ್ವಾಭಾವಿಕ ಹಣ್ಣಿನ ಮರಗಳಾದ ಕೊಟ್ಟೆ ಹಣ್ಣು, ಬಕ್ಲಣ್ಣು, ಹುಬ್ಲಣ್ಣು, ಗೊಣ್ಣೆಹಣ್ಣು, ಕಾಡುನೇರಳೆ, ಪನ್ನೇರಳೆ, ಹಾಲೆಹಣ್ಣು, ಗೇರುಹೆಣ್ಣು ಹೀಗೆ ಹಲವಾರು ಹಣ್ಣಿನ ಮರಗಳನ್ನು ಬೆಳೆಸುವದರಿಂದ ಕಾಡಿನಲ್ಲಿ ಜೀವ ಸಂಕುಲಗಳು ಹೆಚ್ಚುವದಲ್ಲದೆ ಈ ಆಹಾರವನ್ನು ಪ್ರಾಣಿ ಪಕ್ಷಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊ ಯ್ಯುವಾಗ ಉದುರಿದ ಹಣ್ಣಿನ ಬೀಜಗಳಿಂದ ಮತ್ತಷ್ಟು ಕಾಡುಗಳು ಸೃಷ್ಟಿಯಾಗುವದರಲ್ಲಿ ಅನುಮಾನವೇ ಇಲ್ಲ. ಅಲ್ಲದೆ ಈ ರೀತಿಯ ಹಣ್ಣಿನ ಮರಗಳಿಗೆ ಹೆಚ್ಚಿನ ಆರೈಕೆ ಬೇಕಾಗಿರುವದಿಲ್ಲ ಇವು ಸ್ವಾಭಾವಿಕವಾಗಿ ಬೀಳುವ ಮಳೆಯನ್ನೇ ಆಶ್ರಯಿಸಿ ಬೆಳೆಯುತ್ತಾ ಹೋಗುತ್ತವೆ.

ಇಂತಹ ಹಣ್ಣುಗಳನ್ನು ತಿಂದು ಬದುಕುತ್ತಿದ್ದ ಅದೆಷ್ಟೋ ಪಕ್ಷಿ ಸಂಕುಲಗಳಲ್ಲಿ ಕೆಲವೊಂದು ನಶಿಸಿ ಹೋಗಿವೆ, ಇನ್ನು ಕೆಲವು ಅಳಿವಿನ ಅಂಚಿಗೆ ಬಂದು ನಿಂತಿದೆ ಈ ಉದ್ದೇಶದಿಂದಲೇ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸತತ ಎರಡು ತಿಂಗಳ ಪರಿಶ್ರಮದಿಂದ ವಿವಿಧ ಕಾಡು ಹಣ್ಣುಗಳ ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ಬೀಜ ಉಂಡೆಗಳಾಗಿ ಪರಿವರ್ತಿಸಿ ಅರಣ್ಯಾಧಿಕಾರಿಗಳ ಮತ್ತು ಸಿಬ್ಬಂದಿಗಳ ಸಹಾಯದಿಂದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಅವುಗಳನ್ನು ಬಿತ್ತುವ ಕಾರ್ಯಕ್ಕೆ ಕೈ ಹಾಕಿದ್ದಾರೆ. ಬೆಂಕಿಗೆ ಆಹುತಿಯಾಗಿರುವ ಕೆಲವು ಅರಣ್ಯ ಪ್ರದೇಶಗಳಲ್ಲಿನ ಜಾಗಗಳಿಗೆ ಹೆಚ್ಚಿನ ಆದ್ಯತೆ ನೀಡಿ ಅಲ್ಲಿಗೆ ಕಳುಹಿಸಿಕೊಡಲಾಗುವದು ಇದಕ್ಕಾಗಿಯೇ ಶಾಲೆಯಲ್ಲಿ ಬೀಜ ಭಂಡಾರವೊಂದನ್ನು ಸ್ಥಾಪಿಸಲಾಗಿದ್ದು, ವಿದ್ಯಾರ್ಥಿಗಳು ದಿನಂಪ್ರತಿ ಆಯ್ದ ಬೀಜಗಳನ್ನು ತಂದು ಈ ಡಬ್ಬದಲ್ಲಿ ಶೇಖರಿಸಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಲೆನಾಡು ಪ್ರದೇಶಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿದೆ ಕಾಡಿನಲ್ಲಿ ಆಹಾರವಿಲ್ಲದ ಕಾರಣ ಅವು ನಾಡನ್ನು ಪ್ರವೇಶಿಸುತ್ತಿದೆ. ಇದನ್ನರಿತ ಇಕೋ ಕ್ಲಬ್ ಆನೆಗಳಿಗೆ ಕಾಡಿನಲ್ಲಿ ಅವುಗಳಿಗೆ ಬೇಕಾದ ಆಹಾರ ಸಸ್ಯಗಳನ್ನು ಒದಗಿಸುವ ದೃಷ್ಟಿಯಿಂದ ಬೈನೆ ಬೀಜಗಳು ಅಡಿಕೆ, ಹಲಸಿನ ಬೀಜಗಳು, ಈಚಲ ಬೀಜದುಂಡೆ ಗಳನ್ನು ತಯಾರಿಸಿ ಬಿತ್ತುವ ಕಾರ್ಯ ಕ್ರಮವೊಂದನ್ನು ಹಮ್ಮಿಕೊಂಡಿದೆ. ಅಲ್ಲದೇ ಬಾಳೆ ಮತ್ತು ಬಿದಿರಿನ ಸಸ್ಯಗಳನ್ನು ಅರಣ್ಯದಲ್ಲಿ ಹೆಚ್ಚೆಚ್ಚು ಬೆಳೆಯುವ ಗುರಿಯನ್ನು ಹೊಂದಿದ್ದು, ಇದಕ್ಕಾಗಿ ಅರಣ್ಯ ಇಲಾಖೆಯ ಸಹಕಾರವನ್ನು ಬಯಸುತ್ತಿದೆ.