ವೀರಾಜಪೇಟೆ, ಜೂ. 14: ಸರ್ಕಾರದ ಯೋಜನೆಯ ಭಾಗವಾಗಿ ರಸ್ತೆ ನಿರ್ಮಾಣ ಮಾಡಿ ದುರಸ್ತಿಗೊಳಿಸದೆ ಸಾರ್ವಜನಿಕ ಬಳಕೆಗೆ ದುಸ್ತರವಾಗಿಸಿದ್ದರಿಂದ ಬೇಸತ್ತು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಸ್ತೆ ದುರಸ್ತಿ ಮಾಡಿ ಸಮಾಜ ಮುಖಿ ಕಾರ್ಯ ಮಾಡಿರುವ ಪ್ರಸಂಗ ನಗರದ ನೆಹರು ನಗರದಲ್ಲಿ ನಡೆದಿದೆ.
ವೀರಾಜಪೇಟೆ ನಗರದ ಪಟ್ಟಣ ಪಂಚಾಯಿತಿ 10 ನೇ ವಾರ್ಡ್ ಬೆಟ್ಟದಲ್ಲಿ ನೆಲೆಗೊಂಡಿರುವ ನೆಹರುನಗರದಲ್ಲಿ ಸುಮಾರು 10 ವರ್ಷಗಳಿಂದ ಮುಖ್ಯ ರಸ್ತೆಯಲ್ಲಿ ಬೃಹತ್ ಗುಂಡಿಗಳು ಬಿದ್ದಿದ್ದು ವಾಹನ ಚಾಲಕರು ಮತ್ತು ಇಲ್ಲಿ ನೆಲೆಸಿರುವ ನಾಗರಿಕರಿಗೆ ಸಂಚರಿಸಲು ದುಸ್ತರವಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಯಾವದೇ ಒಳಚರಂಡಿ ನಿರ್ಮಾಣ ಮಾಡಿರುವದಿಲ್ಲ ಮಳೆಗಾಲದಲ್ಲಿ ಮಳೆ ನೀರು ರಸ್ತೆಯ ಮೇಲ್ಬಾಗದಲ್ಲಿ ಹರಿಯುವ ಪರಿಣಾಮ ರಸ್ತೆಯು ಸಂಚಾರಕ್ಕೆ ಯೋಗ್ಯವಲ್ಲದ ರೀತಿಯಲ್ಲಿದೆ. ಸ್ಥಳೀಯ ಅಡಳಿತವು ರಸ್ತೆಯನ್ನು ಮರು ಡಾಂಬರೀಕರಣಕ್ಕೆ ಮುಂದಾಗಲಿಲ್ಲ ಅಲ್ಲಲ್ಲಿ ತೇಪೆ ಹಾಕಿದ್ದು ಇದನ್ನು ಮನಗಂಡ ಸ್ಥಳೀಯ ಯುವ ಮಿತ್ರರು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಆದರೂ ಪ್ರಯೋಜನವಾಗದ ಕಾರಣ ನೆಹರು ನಗರದ ಕೆಲವು ಮಿತ್ರರು ಜೊತೆಗೂಡಿ ಸುಮಾರು 20,000 ರೂ ವೆಚ್ಚದಲ್ಲಿ ಕಚ್ಚಾ ವಸ್ತುಗಳನ್ನು ಸಂಗ್ರಹಿಸಿ ಬೃಹತ್ ಗುಂಡಿಬಿದ್ದ 20 ಅಡಿ ಉದ್ದದ ರಸ್ತೆಗೆ ಕಾಂಕ್ರೀಟ್ ಬಳಸಿ 20 ಜನ ಸದಸ್ಯರು ಸ್ವತಃ ದುಡಿದು ಶ್ರಮದಾನದ ಮೂಲಕ ರಸ್ತೆಯನ್ನು ಗುಂಡಿಗಳಿಂದ ಮುಕ್ತವಾಗಿಸಿ ಸಂಚಾರಕ್ಕೆ ಯೋಗ್ಯವನ್ನಾಗಿಸಿದರು.
-ಕೆ.ಕೆ.ಎಸ್. ವೀರಾಜಪೇಟೆ