ಸಿದ್ದಾಪುರ, ಜೂ. 14: ಪ್ರತಿದಿನ ಹಾಡಹಗಲೆ ಮಾಲ್ದಾರೆ ಪಟ್ಟಣದಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿದ್ದು, ಸಾರ್ವಜನಿಕರು ಭಯ ಬೀತರಾಗಿದ್ದಾರೆ.

ಮಾಲ್ದಾರೆ ಅರಣ್ಯ ವ್ಯಾಪ್ತಿಯ ಪ್ರದೇಶಗಳಿಂದ ದಿನನಿತ್ಯ ಕಾಡಾನೆಗಳ ಹಿಂಡು ಮುಖ್ಯ ರಸ್ತೆ ಮಾರ್ಗವಾಗಿ ಘೀಳಿಡುತ್ತಾ ರಾಜಾರೋಷವಾಗಿ ನಡೆದಾಡುತ್ತಿದ್ದು, ಕಾಫಿ ತೋಟ ಗಳಿಗೂ ಲಗ್ಗೆ ಇಡುತ್ತಿರುವದರಿಂದ ಫಸಲು ನಷ್ಟದೊಂದಿಗೆ ಕಾರ್ಮಿಕರು ತೋಟ ಕೆಲಸಕ್ಕೆ ತೆರಳಲು ಹಿಂಜರಿಯುತ್ತಿದ್ದಾರೆ.

ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಾಲ್ದಾರೆ ಮೈಸೂರು ರಸ್ತೆ, ಪಟ್ಟಣದ ಮುಖ್ಯ ಭಾಗಗಳಲ್ಲಿ ಬೆಳಗ್ಗಿನ ಜಾವ ಕಾಡಾನೆಗಳು ಪ್ರತ್ಯಕ್ಷವಾಗುತ್ತಿ ರುವದರಿಂದ ಶಾಲಾ ವಿದ್ಯಾರ್ಥಿಗಳು ಜೀವ ಭಯದಲ್ಲೇ ಶಾಲೆಗೆ ತೆರಳ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಪೋಷಕರಲ್ಲೂ ಆತಂಕ ಉಂಟಾಗಿದೆ. ಮಾಲ್ದಾರೆ ವ್ಯಾಪ್ತಿಯಲ್ಲಿ ಕಾಫಿ ತೋಟಗಳಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು, ದಾಂಧಲೆ ನಡೆಸುತ್ತಿವೆ.

ದಿನನಿತ್ಯ ಕಾಡಾನೆಗಳ ಹಿಂಡು ಸಮೀಪದ ಅರಣ್ಯದಿಂದ ಮಾಲ್ದಾರೆ ಪಟ್ಟಣಕ್ಕೆ ಲಗ್ಗೆ ಇಡುವ ಸಂದರ್ಭದಲ್ಲಿ ಹಿಂತಿರುಗಿ ತೆರಳುವಾಗ ಮಾಲ್ದಾರೆಯ ಗಣಪತಿ ದೇವಾಲಯದ ಬಳಿ ಕೆಲ ಸಮಯ ನಿಂತು ಅಲ್ಲಿಂದ ಕಾಡಿಗೆ ತೆರಳುತ್ತವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮಾಲ್ದಾರೆ ವ್ಯಾಪ್ತಿಯಲ್ಲಿ ವನ್ಯಜೀವಿಗಳ ಹಾವಳಿಯಿಂದಾಗಿ ಗ್ರಾಮಸ್ಥರಿಗೆ ನೆಮ್ಮದಿ ಇಲ್ಲದಂತಾಗಿದೆ.

ಕೂಡಲೇ ಮಾಲ್ದಾರೆ ಪಟ್ಟಣದಲ್ಲಿ ದಿನನಿತ್ಯ ಹಾದುಹೋಗುವ ಕಾಡಾನೆಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಾಡಾನೆಗಳು ಪಟ್ಟಣದಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ನಾಯಿಗಳು ಕಾಡಾನೆಗಳನ್ನು ಕಂಡು ಬೊಗಳಿದ ಸಂದರ್ಭ ರೋಷಗೊಂಡ ಕಾಡಾನೆಗಳು ನಾಯಿಗಳ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ನಾಯಿಗಳು ಬೆದರಿ ಓಡಿವೆ.

- ವಾಸು