ವೀರಾಜಪೇಟೆ, ಜೂ. 14: ವೀರಾಜಪೇಟೆ ವಿಭಾಗಕ್ಕೆ ಸೋಮವಾರದಿಂದ ನಿರಂತರ ಮಳೆಯಾಗುತ್ತಿದ್ದು ನಿನ್ನೆ ದಿನ ಬೆಳಗಿನ 8 ಗಂಟೆಯಿಂದ ಇಂದು ಬೆಳಗಿನ 8 ಗಂಟೆಯವರೆಗೆ 72.20 ಮಿ.ಮೀ (3.05 ಇಂಚುಗಳಷ್ಟು) ಮಳೆ ಸುರಿದಿದೆ.
ಗುರುವಾರ ಬೆಳಗಿನಿಂದಲೇ ಮುಂಗಾರು ಮಳೆ ಚುರುಕುಗೊಂಡಿದ್ದು ಇದರ ಪರಿಣಾಮ ಪಟ್ಟಣದ ಎಲ್ಲ ತೋಡುಗಳು ನೀರಿನಿಂದ ಭರ್ತಿಯಾಗಿ ಹರಿಯುತ್ತಿದ್ದರೆ ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯನ್ನು ಕಂಡಿದೆ. ಬೇತರಿ ಗ್ರಾಮದಲ್ಲಿ ಕಾವೇರಿ ಹೊಳೆ ಸಾಧಾರಣವಾಗಿ ಏರಿಕೆಯನ್ನು ಕಂಡಿದ್ದರೆ ಕದನೂರು ಗ್ರಾಮದ ಕಾವೇರಿಯ ಉಪ ಹೊಳೆಯಲ್ಲಿಯೂ ನೀರಿನ ಮಟ್ಟ ಏರಿಕೆಯಾಗಿ ಹರಿಯುತ್ತಿದೆ. ಕಡಂಗ, ಕೆದಮುಳ್ಳೂರು, ಪೆರುಂಬಾಡಿ, ಆರ್ಜಿ, ಹೆಗ್ಗಳ ಸೇರಿದಂತೆ ವಿವಿಧೆಡೆಗಳಲ್ಲಿ ಮುಂಗಾರು ಚುರುಕಾಗಿದೆ ಎಂದು ಗ್ರಾಮಸ್ತರು ತಿಳಿಸಿದ್ದಾರೆ.
ನಿನ್ನೆ ದಿನ ರಾತ್ರಿ ಬಿದ್ದ ಮಳೆಗೆ ಇಲ್ಲಿನ ತಾಲೂಕು ಮೈದಾನದ ಎರಡು ಬದಿಗಳಲ್ಲಿ ಅಳವಡಿಸಲಾಗಿದ್ದ ಗ್ಯಾಲರಿಯ ಮೇಲ್ಚಾವಣಿಯ ಸಿಮೆಂಟು ಶೀಟುಗಳು ಹಾರಿ ಹೋಗಿದ್ದು ಮೈದಾನದಲ್ಲಿ ಸುಮಾರು ಒಂದಡಿಯಷ್ಟು ಮಳೆ ನೀರು ನಿಂತಿದೆ. ರಾತ್ರಿ ಮಳೆಗೆ ಇಲ್ಲಿನ ಗಾಂಧಿನಗರಕ್ಕೆ ಹೋಗುವ ರಸ್ತೆಯಲ್ಲಿರುವ ಮೋಹನ್ ಎಂಬುವರ ಮನೆಯ ಬಳಿಯಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಕಾಂಪೌಂಡ್ ಭಾಗಶ: ಕುಸಿದಿದೆ.
ವೀರಾಜಪೇಟೆಯ ಅರಸುನಗರ, ಮಲೆತಿರಿಕೆಬೆಟ್ಟ, ಅಯ್ಯಪ್ಪ ದೇವಸ್ಥಾನ, ನೆಹರೂನಗರದ ಪ್ರದೇಶಗಳಲ್ಲಿಯೂ ಮುಂಗಾರು ಮಳೆ ಚುರುಕಾಗಿದ್ದು ಈ ಪ್ರದೇಶದಲ್ಲಿ ನಿವಾಸಿಗಳು ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ವೀರಾಜಪೇಟೆ ವಿಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವದರಿಂದ ವಿದ್ಯುತ್ ಸಂಪರ್ಕಕ್ಕೂ ಅಡಚಣೆಯಾಗಿದೆ. ರಾತ್ರಿ ವೇಳೆಯಲ್ಲಂತೂ ವೀರಾಜಪೇಟೆ ಪಟ್ಟಣದಲ್ಲಿ ಕಾರ್ಗತ್ತಲು ಆವರಿಸುತ್ತಿದೆ. ಬೇತರಿ ಗ್ರಾಮದ ಕಾವೇರಿಹೊಳೆ ಬದಿಯಲ್ಲಿರುವ ಮೂಲ ವಿದ್ಯುತ್ ಸ್ಥಾವರಕ್ಕೆ ನಿರಂತರ ಸಂಪರ್ಕ ಕಡಿತಗೊಳ್ಳುತ್ತಿರುವದರಿಂದ ವೀರಾಜಪೇಟೆ ಪಟ್ಟಣಕ್ಕೆ ಕುಡಿಯುವ ನೀರು ಪೊರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ ಎಂದು ಅಧಿಕಾರಿಗಳು “ಶಕ್ತಿ” ಗೆ ತಿಳಿಸಿದ್ದಾರೆ.