ವೀರಾಜಪೇಟೆ, ಜೂ. 14: ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಮನೆ ಬಿಟ್ಟು ತೆರಳಿ ನಂತರದಲ್ಲಿ ತೋಟದ ಕೊನೆಯ ಅಂಚಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ವೀರಾಜಪೇಟೆ ಗ್ರಾಮಾಂತರ ಪ್ರದೇಶವಾದ ಕೆದಮಳ್ಳೂರು ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕಿನ ಗಡಿ ಭಾಗವಾದ ಕುಟ್ಟ ಗ್ರಾಮದ ನಾಣಚ್ಚಿ ಗದ್ದೆ ಹಾಡಿಯ ನಿವಾಸಿ ಜೇನು ಕುರುಬರ ಕೆಂಚ ಮತ್ತು ಲಿಂಗಿ ದಂಪತಿಗಳ ಪುತ್ರ ಶಿವಣ್ಣ 25 ಮೃತ ವ್ಯಕ್ತಿ. ಶಿವಣ್ಣ ಮತ್ತು ಪೋಷಕರನ್ನು ತೋಟದ ಕೆಲಸಕ್ಕೆಂದು ಕೆದಮುಳ್ಳೂರು ಗ್ರಾಮದ ಸುಮಿ ನಾಣಯ್ಯ ಎಂಬವರು ಕರೆತಂದಿದ್ದರು.
ತಾ. 7 ರಂದು ತಂದೆ ತಾಯಿಯೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಹೊರ ನಡೆದಿದ್ದಾನೆ. ಪೋಷಕರು ತೋಟಗಳಲ್ಲಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದ್ದರೂ ಪತ್ತೆಯಾಗಿಲ್ಲ. ನಿನ್ನೆ ಅವನ ಮೃತದೇಹ ಮರದಲ್ಲಿ ನೇತಾಡುತ್ತಿದ್ದುದು ಗೋಚರಿಸಿದೆ. ತೋಟದ ಮಾಲೀಕರು ಗ್ರಾಮಾಂತರ ಠಾಣೆಗೆ ಕರೆ ಮಾಡಿದ್ದು, ಸ್ಥಳಕ್ಕೆ ಪೊಲೀಸರು ಅಗಮಿಸಿ ಮೃತನ ತಾಯಿ ಲಿಂಗಿ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅತ್ಮಹತ್ಯೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.