*ಸಿದ್ದಾಪುರ, ಜೂ. 14: ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವತಿಯಿಂದ ವಾಲ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ ಹಾಗೂ ವಿಶೇಷಚೇತನರಿಗೆ ಸರಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ನಾಗರತ್ನ ವಹಿಸಿದ್ದರು. ಸುಂಟಿಕೊಪ್ಪ ಸ್ವಸ್ಥ ಕೇಂದ್ರದ ಸಮನ್ವಯಾಧಿಕಾರಿ ಲತಾ ಮಾತನಾಡಿ, ಸರಕಾರದಿಂದ ಮಾಸಾಶನ, ಬಸ್ಪಾಸ್ ಇತರ ಉಪಕರಣಗಳನ್ನು ಇಲಾಖೆಯಿಂದ ನೀಡಲಾಗುತ್ತಿದೆ. ದಾಖಲಾತಿ ನೀಡಿದರೆ ಅದನ್ನು ಒದಗಿಸಿಕೊಡುತ್ತೇವೆ ಎಂದರು.
ಪಿಡಿಓ ಅನಿಲ್ ಮಾತನಾಡಿ, ಆಸಕ್ತ ವಿಶೇಷಚೇತನರು ಉದ್ಯೋಗಖಾತ್ರಿ ಯೋಜನೆಗೆ ಹೆಸರು ನೋಂದಾಯಿಸುವ ಮೂಲಕ ವರ್ಷದಲ್ಲಿ 100 ದಿನ ಕೆಲಸ ನಿರ್ವಹಿಸಲು ಅವಕಾಶವಿದೆ. ಸ್ವಯಂ ಉದ್ಯೋಗ ಮಾಡುವದರಿಂದ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಬಹುದೆಂದರು.
ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿ, ಗ್ರಾ.ಪಂ. ಅಧ್ಯಕ್ಷೆ ನಾಗರತ್ನ, ಸದಸ್ಯರಾದ ಸುಧಿ, ಪಿಡಿಓ ಅನಿಲ್ ಹಾಗೂ ವಿಶೇಷಚೇತನರು ಗಿಡ ನೆಡುವ ಮೂಲಕ ಸರಕಾರದ ಪರಿಸರ ಸತ್ಯಮೇಯ ಜಯತೇ ಹಾಗೂ ಜಲಾವೃತ ಕಾರ್ಯಕ್ರಮವನ್ನು ಆಚರಿಸಲಾಯಿತು. ಸಾಮಾಜಿಕ ಅರಣ್ಯ ಇಲಾಖೆಯಿಂದ ಗ್ರಾ.ಪಂ.ಗೆ ತರಿಸಲಾಗಿದ್ದ 3500 ಹಣ್ಣಿನ ಗಿಡಗಳನ್ನು ಉಚಿತವಾಗಿ ಗ್ರಾಮಸ್ಥರಿಗೆ ವಿತರಿಸಲಾಯಿತು.