ಮಡಿಕೇರಿ, ಜೂ. 14: ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತಲಕಾವೇರಿ ಮತ್ತು ಶ್ರೀ ಭಗಂಡೇಶ್ವರ ಕ್ಷೇತ್ರಗಳು ಸೇರುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳಲ್ಲದೆ, ಪ್ರವಾಸಿಗರು ದಿನವೂ ಆಗಮಿಸುವದರಿಂದ ಸ್ವಚ್ಚತೆಯೊಂದಿಗೆ ಗ್ರಾಮಗಳ ಅಭಿವೃದ್ದಿಗೆ ಹೆಚ್ಚಿನ ವಿಶೇಷ ಅನುದಾನವನ್ನು ಮಂಜೂರು ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿರುವದಾಗಿ ಸಭೆಯೊಂದರಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುದುಕುಳಿ ಭರತ್ ತಿಳಿಸಿದರು.

ಹಿಂದಿನ ಜಿಲ್ಲಾಧಿಕಾರಿ ಡಿ.ಎಸ್. ಅಶ್ವಥ್ ಮತ್ತು ಸಂಸದ ಪ್ರತಾಪ್ ಸಿಂಹ ಆಗಮಿಸಿದ ಸಂದರ್ಭ ಈ ಬಗ್ಗೆ ಪ್ರಸ್ತಾಪಿಸಿದಾಗ ಸ್ಪಂದಿಸಿದ ಅವರು ರಾಜ್ಯ ಸರಕಾರದೊಂದಿಗೆ ವ್ಯವಹರಿಸುವದಾಗಿ ಭರವಸೆ ನೀಡಿದ್ದರೆಂದು ಭರತ್ ಹೇಳಿದರು. ಹೀಗೆಯೇ ಜಿಲ್ಲಾ ಉಸ್ತುವಾರಿ ಸಚಿವರುಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ವಿಶೇಷ ಅನುದಾನ ಮಂಜೂರಾಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಶುಲ್ಕ ವಸೂಲಿಗೆ ಪರ - ವಿರೋಧ : ಯಾತ್ರಾರ್ಥಿಗಳ ಮತ್ತು ಪ್ರವಾಸಿಗರ ವಾಹನ ನಿಲುಗಡೆ ಶುಲ್ಕ ವಸೂಲಿಗೆ ಪರ-ವಿರೋಧವಿದ್ದರೂ ಸರಕಾರದ ಅನುದಾನದ ಕೊರತೆ ಹಾಗೂ ಸರ್ವಾಂಗೀಣ ಅಭಿವೃದ್ದಿಯ ಹಿನ್ನೆಲೆಯಲ್ಲಿ ಹೈಕೋರ್ಟ್‍ನಿಂದ ತಡೆಯಾಜ್ಞೆ ತಂದು ವಾಹನ ನಿಲುಗಡೆ ಶುಲ್ಕ ಸಂಗ್ರಹಿಸಿ ಹಣಕಾಸನ್ನು ಕ್ರೋಢೀಕರಿಸಿ ಗ್ರಾಮಾಭಿವೃದ್ದಿಗೆ ಭಾಗಮಂಡಲ ಗ್ರಾಮ ಪಂಚಾಯಿತಿ ಒತ್ತು ನೀಡಿದೆ

ಕಾವೇರಿ ಮಾತೆ ಉಗಮ ಸ್ಥಳ ತಲಕಾವೇರಿ-ಭಾಗಮಂಡಲ ಸೇರಿದಂತೆ ಒಟ್ಟು ಐದು ಗ್ರಾಮಗಳಾದ ತಾವೂರು, ತಣ್ಣಿಮಾನಿ, ಚೇರಂಗಾಲ ಮತ್ತು ಕೋರಂಗಾಲ ವ್ಯಾಪ್ತಿಯಲ್ಲಿ ಒಟ್ಟು 4,850 ಜನ ಸಂಖ್ಯೆಯನ್ನು ಹೊಂದಿದೆ. ಐದು ಗ್ರಾಮಗಳ ಅಂಗಡಿಗಳ ಮತ್ತು ಹೊಟೇಲುಗಳ ಕಂದಾಯ ವಾರ್ಷಿಕ ರೂ. 3 ಲಕ್ಷ ಸಂಗ್ರಹವಾಗುತ್ತಿದೆ.

ಸರಕಾರದಿಂದ ವಾರ್ಷಿಕವಾಗಿ ಬರುವ ರೂ. 15 ಲಕ್ಷ ಅನುದಾನದಿಂದ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ರಸ್ತೆ, ಮೋರಿ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆಗೆ ಮತ್ತು ಗ್ರಾಮಸ್ಥರ ಆಶೋತ್ತರಗಳನ್ನು ಪೂರೈಸಲು ವಾಹನಗಳ ನಿಲುಗಡೆ ಶುಲ್ಕ ಸಂಗ್ರಹಕ್ಕೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯಲ್ಲಿ ಚರ್ಚಿಸಿದ ಬಳಿಕ ತೀರ್ಮಾನ ಕೈಗೊಂಡು ಟೆಂಡರ್ ಆಹ್ವಾನಿಸಿ ಹಣವನ್ನು ಕ್ರೋಢೀಕರಿಸಲಾಗುತ್ತಿದೆ.

ವಾಹನಗಳ ಸಂಖ್ಯೆ : ಸರಕಾರಿ ರಜೆ ದಿನಗಳು ಸೇರಿದಂತೆ ಶನಿವಾರ ಮತ್ತು ಭಾನುವಾರ ಸುಮಾರು ರೂ. 8 ಸಾವಿರಗಳಷ್ಟು ಹಣ ಸಂಗ್ರಹವಾಗುತ್ತಿದೆ. ಉಳಿದಂತೆ ಇತರ ದಿನಗಳಲ್ಲಿ ರೂ. 4, 5 ಮತ್ತು 6 ಸಾವಿರಗಳಷ್ಟು ಹಣ ಸಂಗ್ರಹವಾಗುತ್ತಿದೆ.

ಹೀಗೆ ಸಂಗ್ರಹವಾದ ಒಟ್ಟು ಹಣದಲ್ಲಿ ಎರಡು ಕ್ಷೇತ್ರಗಳ ದೈನಂದಿನ ಸ್ವಚ್ಛತಾ ಕಾರ್ಯಗಳಿಗೆ ಅಂದಾಜು ರೂ.30 ಸಾವಿರಗಳಷ್ಟು ವೆಚ್ಚವಾಗುತ್ತಿದೆ. ಉಳಿದ ಹಣವನ್ನು ಅಭಿವೃದ್ದಿ ಕೆಲಸ ಕಾರ್ಯಗಳಿಗೆ ಬಳಸಲಾಗುತ್ತಿದೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅಶೋಕ್ ಹೇಳಿದರು.

ತಲಕಾವೇರಿ ಮತ್ತು ಶ್ರೀಭಗಂಡೇಶ್ವರ ಸನ್ನಿಧಿ ಸೇರಿದಂತೆ ಗ್ರಾಮಗಳ ಅಭಿವೃದ್ಧಿಗೆ ಸರಕಾರ ಕೂಡಲೇ ಹೆಚ್ಚಿನ ಅನುದಾನವನ್ನು ಒದಗಿಸಿದಲ್ಲಿ ಆ ಕ್ಷಣದಿಂದಲೇ ಯಾತ್ರಾರ್ಥಿಗಳಿಂದ ಮತ್ತು ಪ್ರವಾಸಿಗರಿಂದ ದೈನಂದಿನ ವಾಹನ ನಿಲುಗಡೆ ಶುಲ್ಕವನ್ನು ನಿಲ್ಲಿಸಲಾಗುವದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.