ಸೋಮವಾರಪೇಟೆ,ಜೂ.14: ಬಿರುಬೇಸಿಗೆ ಮರೆಯಾಗಿ ಮಳೆಯ ಆಗಮನವಾದ ಬೆನ್ನಲ್ಲೇ ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶ ವ್ಯಾಪ್ತಿಯಲ್ಲಿ ಕೃಷಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರೈತರು ಗದ್ದೆಗಳ ಉಳುಮೆ ಕಾರ್ಯಕ್ಕೆ ಮುಂದಾಗಿದ್ದಾರೆ.

ತಾಲೂಕಿನ ಶಾಂತಳ್ಳಿ, ಬೆಟ್ಟದಳ್ಳಿ ವ್ಯಾಪ್ತಿಯಲ್ಲಿ ಕೃಷಿಕರು ಗದ್ದೆಯನ್ನು ಹಸನು ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಹರಗ ವ್ಯಾಪ್ತಿಯಲ್ಲಿ ಹಲವಷ್ಟು ರೈತರು ಉಳುಮೆ ಕಾರ್ಯ ಮಾಡಿದ್ದಾರೆ. ಈ ಭಾಗದಲ್ಲಿ 200ಕ್ಕೂ ಅಧಿಕ ಏಕರೆ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಭತ್ತ ಸೇರಿದಂತೆ ಇತರ ತರಕಾರಿ ಬೆಳೆಗಳನ್ನು ಬೆಳೆಯುತ್ತಾರೆ.

ಹರಗ ವ್ಯಾಪ್ತಿಯಲ್ಲಿ ಕಳೆದ ವರ್ಷ ಈವರೆಗೆ 24 ಇಂಚು ಮಳೆಯಾಗಿದ್ದರೆ, ಪ್ರಸಕ್ತ ವರ್ಷ ಕೇವಲ 5 ಇಂಚಿನಷ್ಟು ಮಳೆ ಸುರಿದಿದೆ. ಕಳೆದ 24 ಗಂಟೆಗಳಲ್ಲಿ 1 ಇಂಚಿನಷ್ಟು ಮಳೆಯಾಗಿದ್ದು, ಈ ವರ್ಷದ ಅಧಿಕ ಮಳೆಯಾಗಿದೆ ಎಂದು ಕೃಷಿಕ ಶರಣ್ ತಿಳಿಸಿದ್ದಾರೆ.

ಗದ್ದೆಗಳನ್ನು ಟಿಲ್ಲರ್, ಟ್ರ್ಯಾಕ್ಟರ್ ಸೇರಿದಂತೆ ಜೋಡೆತ್ತುಗಳ ಮೂಲಕವೂ ಉಳುಮೆ ಮಾಡಲಾಗುತ್ತಿದ್ದು, ಸಸಿಮಡಿ ತಯಾರಿಗೆ ಗದ್ದೆಯನ್ನು ಸಿದ್ಧಗೊಳಿಸಲಾಗುತ್ತದೆ. ಕಳೆದ ವರ್ಷ ಈ ವೇಳೆಗಾಗಲೇ ಸಸಿಮಡಿ ತಯಾರಿ ಕಾರ್ಯ ಪೂರ್ಣಗೊಂಡಿದ್ದು, ನಾಟಿಯ ಹಂತಕ್ಕೆ ಬಂದಿತ್ತು. ಈ ವರ್ಷ ಮಳೆ ದೂರವಾದ ಹಿನ್ನೆಲೆ ಕೃಷಿ ಕಾರ್ಯವೂ ಮುಂದೂಡಲ್ಪಟ್ಟಿದೆ ಎಂದು ಶರಣ್ ಅಭಿಪ್ರಾಯಿಸಿದ್ದಾರೆ.