ಮಡಿಕೇರಿ, ಜೂ. 14: ಪಡಿತರ ಚೀಟಿ ಸಿದ್ಧಪಡಿಸುವಿಕೆಯ ‘ಲಾಗಿನ್’ ಮಾಡುವ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ಲೋಕಾಸಭಾ ಚುನಾವಣೆ ಸೇರಿದಂತೆ ಇತರ ಕಾರಣಗಳಿಂದ ಸ್ಥಗಿತಗೊಂಡ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಇದೀಗ ಮತ್ತೆ ಆರಂಭಗೊಂಡಿದ್ದರಿಂದ ಮಡಿಕೇರಿ ತಾಲೂಕು ಕಚೇರಿ ಸೇರಿದಂತೆ ವೀರಾಜಪೇಟೆ ಮತ್ತು ಸೋಮವಾರಪೇಟೆ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಆಹಾರ ಇಲಾಖೆಯಲ್ಲಿನ ಕಂಪ್ಯೂಟರ್ ನಿರಂತರವಾಗಿ ‘ಸರ್ವರ್ ಸ್ಲೋ’ ಆಗುವದರಿಂದ ಸಕಾಲದಲ್ಲ್ಲಿ ‘ಲಾಗಿನ್’ ಆಗದೆ ಕಂಪ್ಯೂಟರ್ ಆಪರೇಟರ್‍ಗಳು ಇಕ್ಕಟ್ಟಿಗೆ ಸಿಲುಕುವರು. ‘ಇಲಿಗೆ ಪ್ರಾಣ ಸಂಕಟ-ಬೆಕ್ಕಿಗೆ ಆಟ’ ಎಂಬಂತೆ ಕಚೇರಿ ಮುಂದೆ ಕಾರ್ಡುದಾರರು ಕಂಪ್ಯೂಟರ್ ಆಪರೇಟರ್‍ಗಳ ಮತ್ತು ಇಲಾಖಾಧಿಕಾರಿಗಳ ವಿರುದ್ಧ ಅಸಮಾ ಧಾನಗೊಂಡು ಪರದಾಡುತ್ತಿದ್ದಾರೆ.
ಪ್ರತಿದಿನ ದೂರದ ಕಡಮಕಲ್ಲು, ಕರಿಕೆ, ಕುದುರೆಪಾಯ, ಕಡಂಗ ಇನ್ನಿತರ ಗ್ರಾಮೀಣ ಪ್ರದೇಶಗಳಿಂದ ಕೆಲಸ ಕಾರ್ಯಗಳನ್ನು ಬಿಟ್ಟು ಆಹಾರ ಇಲಾಖೆಯ ಮುಂಭಾಗ ಸಾಲಿನಲ್ಲಿ ನಿಂತು ‘ಲಾಗಿನ್’ಗಾಗಿ ಕಾಯುತ್ತ ಕಾರ್ಡುದಾರರು ಮಾನಸಿಕವಾಗಿ ಬಳಲುವಂತಾಗಿದೆ.
ಇಲ್ಲಿ ‘ಲಾಗಿನ್’ ಆಗದಿದ್ದರೆ ಗ್ರಾಮ ಪಂಚಾಯಿತಿಗಳಿಗೆ ವರ್ಗಾವಣೆ ಮಾಡಲಿ ಎಂದು ಕರಿಕೆ ರಾಮಣ್ಣ, ಆವಂದೂರು ಎಂ.ಕೆ. ಕಿಶೋರ್, ಕೆ.ಬಿ. ಗೌರಮ್ಮ ಅವರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅನುಕೂಲ ಮಾಡಿಕೊಡುತ್ತೇವೆ
ಸರಕಾರದ ವ್ಯವಸ್ಥೆ, ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಆದರೂ, ಜನರಿಗೆ ಅನಾನುಕೂಲವಾಗದಂತೆ ಮಾನ ವೀಯ ದೃಷ್ಟಿಯಿಂದ ಸ್ಪಂದಿಸುವಂತೆ ಕೆಳಗಿನ ಅಧಿಕಾರಿ-ಸಿಬ್ಬಂದಿಗಳಿಗೆ ಕಟ್ಟು ನಿಟ್ಟಾಗಿ ಸೂಚಿಸಿದ್ದೇನೆ. ಕಾರ್ಡುದಾರರ ಬೇಡಿಕೆ ಯಂತೆ ಗ್ರಾಮ ಪಂಚಾಯಿತಿ ಗಳಿಗೆ ‘ಲಾಗಿನ್’ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲ ಎಂದು ಆಹಾರ ಇಲಾಖೆ ಉಪನಿರ್ದೇಶಕ ರಾಜೇಂದ್ರ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.