ಮಡಿಕೇರಿ, ಜೂ. 14: ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿ.ಎಫ್.ಓ.) ಎಂ.ಎಲ್. ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.ಈ ಬಗ್ಗೆ ಬೆಂಗಳೂರಿನ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯಪಡೆ ಮುಖ್ಯಸ್ಥರು) ಅವರ ಕಚೇರಿಯಿಂದ ಆದೇಶ ಹೊರಬಿದ್ದಿದೆ. ತಾ. 14ರಿಂದ ಅನ್ವಯವಾಗುವಂತೆ ಅಮಾನತು ಆದೇಶ ಹೊರಡಿಸಲಾಗಿದೆ. ಆದರೆ ಈ ಆದೇಶದಲ್ಲಿ ಇದಕ್ಕೆ ಕಾರಣವನ್ನು ಉಲ್ಲೇಖ ಮಾಡಲಾಗಿಲ್ಲ. ಈ ಸ್ಥಾನದ ಪ್ರಭಾರ ಅಧಿಕಾರಿಯಾಗಿ ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿರುವ ಮರಿಯಾ ಕ್ರಿಸ್ತರಾಜು ಅವರನ್ನು ನೇಮಕ ಮಾಡಲಾಗಿದೆ.

ಮಡಿಕೇರಿ ನಗರದ ಒತ್ತಿನಲ್ಲೇ ಬರುವ ಕೆ. ನಿಡುಗಣೆ ಗ್ರಾಮದಲ್ಲಿ 800ಕ್ಕೂ ಅಧಿಕ ಮರಗಳನ್ನು ಕಡಿಯಲು ಇವರು ಅನುಮತಿ ನೀಡಿದ್ದ ಬಗ್ಗೆ ಇತ್ತೀಚೆಗೆ ‘ಶಕ್ತಿ’ ಬೆಳಕಿಗೆ ತಂದಿತ್ತು. ಈ ವಿಚಾರ ಬಹುತೇಕ ಮಾಧ್ಯಮಗಳಲ್ಲಿ ಭಿತ್ತರಗೊಂಡು ಇಡೀ ರಾಜ್ಯದಲ್ಲಿ ಭಾರೀ ಸುದ್ದಿಯಾಗಿತ್ತು. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡ ಈ ಬಗ್ಗೆ ಸ್ಪಂದಿಸಿ ಮರ ಕಡಿತಲೆ ನಿಲ್ಲಿಸುವಂತೆ ಆದೇಶಿಸಿ ತನಿಖೆಗೆ ಸೂಚಿಸಿದ್ದರು. ಮಾಜೀ ಸಚಿವ ಯಂ.ಸಿ. ನಾಣಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಕಂದಾಯ- ಅರಣ್ಯ ಸಚಿವರನ್ನೆಲ್ಲಾ ಸಂಪರ್ಕಿಸಿ, ಪ್ರಕರಣದ ಬಗ್ಗೆ ವಿವರಿಸಿದ್ದರು.