ಸೋಮವಾರಪೇಟೆ,ಜೂ.14: ಸ್ಕೂಟರ್‍ನಲ್ಲಿ ಕಾಫಿ ತೋಟಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಸಂದರ್ಭ ಕೃಷಿಕರೋರ್ವರ ಮೇಲೆ ಕಾಡಾನೆ ಧಾಳಿ ನಡೆಸಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಸಮೀಪದ ಗೌಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೂಗೂರಿನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಕೂಗೂರು ಗ್ರಾಮದ ಕೃಷಿಕ ಕೆ.ಎ.ಜಯಪ್ಪ ಎಂಬವರು ಇಂದು ಬೆಳಿಗ್ಗೆ 6.30ರ ಸಮಯದಲ್ಲಿ ತೋಟದಿಂದ ಸ್ಕೂಟರ್‍ನಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭ ಮರಿಯಾನೆ ಜತೆಗಿದ್ದ ಕಾಡಾನೆ ಧಾಳಿ ನಡೆಸಿದೆ.

ಕಾಡಾನೆಯಿಂದ ತಪ್ಪಿಸಿಕೊಳ್ಳುವ ಸಂದರ್ಭ ಜಯಪ್ಪ ಅವರು ವಾಹನ ಸಹಿತ ಚರಂಡಿಯೊಳಗೆ ಬಿದ್ದು ಕಿರುಚಿಕೊಂಡಿದ್ದಾರೆ. ಈ ಸಂದರ್ಭ ಕಾಡಾನೆಯ ಮರಿ ಅನತಿ ದೂರದಲ್ಲಿದ್ದ ಕಾರಣ ತಾಯಿ ಆನೆ ಮರಿ ಕಡೆಗೆ ಗಮನ ಹರಿಸಿದೆ. ಕೂಡಲೆ ಎಚ್ಚೆತ್ತುಕೊಂಡ ಕೃಷಿಕ ಚರಂಡಿಯಿಂದ ಮೇಲೆದ್ದು ಓಡಿ ಜೀವ ಉಳಿಸಿಕೊಂಡಿದ್ದಾರೆ.

ಚರಂಡಿಯೊಳಗೆ ಬಿದ್ದಿದ್ದ ಸ್ಕೂಟರ್‍ನ ಮೇಲೆ ತನ್ನ ಆಕ್ರೋಶ ವ್ಯಕ್ತಪಡಿಸಿರುವ ಕಾಡಾನೆ, ತುಳಿದು ಜಖಂಗೊಳಿಸಿದೆ. ಸ್ಥಳಕ್ಕೆ ಶನಿವಾರಸಂತೆ ಅರಣ್ಯ ಇಲಾಖೆಯ ಡಿಆರ್‍ಎಫ್‍ಓ ಗೋವಿಂದರಾಜ್, ಪ್ರಶಾಂತ್, ಸಿಬ್ಬಂದಿಗಳಾದ ಗಣೇಶ್, ನಂದ, ವೆಂಕಟೇಶ್, ಕೀರ್ತಿ, ದೇವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆ ನಂತರ ಕಾಡಾನೆ ತನ್ನ ಮರಿಯೊಂದಿಗೆ ಮಾಲಂಬಿ ಅರಣ್ಯದೊಳಗೆ ತೆರಳಿದೆ. ಕಲ್ಲುಕೋರೆ ಇದ್ದ ಕಡೆ ಆನೆ ಕಂದಕ ನಿರ್ಮಿಸಿಲ್ಲ. ಕಾಡಾನೆಗಳು ಹಗಲಿನ ವೇಳೆ ಗ್ರಾಮದ ಕೃಷಿ ಭೂಮಿಗೆ ನುಗ್ಗಿ ಫಸಲು ನಷ್ಟ ಮಾಡುತ್ತಿವೆ. ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.