ಮಡಿಕೇರಿ, ಜೂ. 13: ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ ರಚನೆಯಾಗಬೇಕಿತ್ತು.

ಆದರೆ ಪಕ್ಷದವರೇ ಆದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರ ಗಮನಕ್ಕೆ ತರದೆ ಕಾಂಗ್ರೆಸ್ ಪಕ್ಷದವರು ಯಾಕೂಬ್ ಅವರ ಅಧ್ಯಕ್ಷತೆಯಲ್ಲಿ ವಕ್ಫ್ ಬೋರ್ಡ್ ರಚನೆ ಮಾಡಿದ್ದಾರೆ. ಅದರಲ್ಲಿ ಜೆಡಿಎಸ್‍ನ ಅಲ್ಪಸಂಖ್ಯಾತರಿಗೆ ಅವಕಾಶ ನೀಡಿಲ್ಲ. ಆದ್ದರಿಂದ ಈಗ ಇರುವ ವಕ್ಫ್ ಸಮಿತಿಯನ್ನು ವಿಸರ್ಜಿಸಿ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ನೂತನ ಸಮಿತಿಯನ್ನು ರಚಿಸಬೇಕು ಎಂದು ಆಗ್ರಹಿಸಿದರು.

ಕೊಡಗಿನಲ್ಲಿ ಬಿಜೆಪಿ ಪಕ್ಷದ ನಂತರ ಜೆಡಿಎಸ್ ಪ್ರಬಲವಾಗಿದ್ದು, ಕಾಂಗ್ರೆಸ್ 3ನೇ ಸ್ಥಾನದಲ್ಲಿದೆ. ಆದ್ದರಿಂದ ಸಮಿತಿಯಲ್ಲಿ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಿ ಜೆಡಿಎಸ್‍ಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಪಕ್ಷದಲ್ಲಿ ಒಬ್ಬನೇ ನಾಯಕನಿರಬೇಕು. ಎಲ್ಲರೂ ಅವರಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಪಕ್ಷವನ್ನು ಸಂಘಟಿಸಬೇಕಾಗುತ್ತದೆ. ಆದರೆ ಜೆಡಿಎಸ್‍ನಲ್ಲಿ ಎಲ್ಲವೂ ಸರಿ ಕಾಣಿಸುತ್ತಿಲ್ಲ. ಕೆಲವು ಮಂದಿ ಜೀವಿಜಯ ಹಿಂದೆ ಬಿದ್ದಿದ್ದರೆ, ಇನ್ನು ಕೆಲವು ಮಂದಿ ಸಂಕೇತ್ ಪೂವಯ್ಯ ಅವರ ಹಿಂದೆ ಬಿದ್ದಿದ್ದಾರೆ. ಜೀವಿಜಯ ಅವರು ಚುನಾವಣೆಯ ಸೋಲಿನ ಬಳಿಕ ಮನೆ ಸೇರಿದ್ದು, ಅವರಿಂದ ಪಕ್ಷ ಸಂಘಟನೆ ಸಾಧ್ಯವೇ ಇಲ್ಲ ಎಂದು ಇಸಾಕ್‍ಖಾನ್ ಕುಟುಕಿದರು.

ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ರಾಜ್ಯ ಉಪಾಧ್ಯಕ್ಷ ಶರೀಫ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಇಬ್ರಾಹಿಂ, ಖಜಾಂಚಿ ಡೆನ್ನಿ ಬರೋಸ್, ಸಂಘಟನಾ ಕಾರ್ಯದರ್ಶಿ ಕ್ಲಾಡಿ, ಅಲ್ಪಸಂಖ್ಯಾತರ ಘಟಕದ ಕಾರ್ಯಕರ್ತರು ಇದ್ದರು.