ಕೂಡಿಗೆ, ಜೂ. 13: ಸರ್ಕಾರಿ ಗಿರಿಜನ ಆಶ್ರಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೊಡಗು ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ನವೋದಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಜೇನುಕುರುಬ ಮತ್ತು ಯರವ ಜನಾಂಗದ ವಿದ್ಯಾರ್ಥಿಗಳಲ್ಲಿ ಮೊದಲ ಬಾರಿಗೆ ನವೋದಯದಲ್ಲಿ ಜೇನುಕುರುಬರ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿರುವದು ವಿಶೇಷವಾಗಿದೆ.
ಬಸವನಹಳ್ಳಿ ಸರ್ಕಾರಿ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿನಿ ಜಿ.ಕೆ. ರಾಜೇಶ್ವರಿ ಮತ್ತು ಕರಿಕೆ ಸರ್ಕಾರಿ ಗಿರಿಜನ ಆಶ್ರಮ ಶಾಲೆಯ ವಿದ್ಯಾರ್ಥಿನಿ ಭಾಗ್ಯವತಿ ಇವರು ಇತ್ತೀಚೆಗೆ ನಡೆದ ನವೋದಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರವೇಶಕ್ಕೆ ಅರ್ಹರಾಗಿದ್ದಾರೆ.
ಜೇನುಕುರುಬರ ಮತ್ತು ಯರವ ಜನಾಂಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಪ್ರೇರಣೆಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸಲು ಬೇಕಾದ ಭೋದನೆಯನ್ನು ಆಯಾ ಆಶ್ರಮ ಶಾಲೆಗಳ ಶಿಕ್ಷಕರು ಉತ್ತಮವಾಗಿ ತರಬೇತಿ ನೀಡಿದ ಫಲವಾಗಿ ಇಂದು ಈ ಸಮುದಾಯದ ಇಬ್ಬರು ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆಯಾಗಿರುವದು ರಾಜ್ಯದಲ್ಲಿಯೇ ವಿಶೇಷವಾಗಿದೆ. ಇದುವರೆಗೂ ನವೋದಯ ಪರೀಕ್ಷೆಯನ್ನು ಬರೆಯದ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿಗಳು ಪ್ರೇರಣೆಯಾಗಿದ್ದಾರೆ ಹಾಗೂ ಈ ಜನಾಂಗದ ವಿದ್ಯಾರ್ಥಿಗಳು ಇನ್ನೂ ಶಿಕ್ಷಣದಲ್ಲಿ ಮುಂದೆ ಬರಲು ಇಲಾಖೆಯ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ.
ಜಿಲ್ಲಾ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆಯ ಅಧಿಕಾರಿ ಶಿವಕುಮಾರ್ ಮತ್ತು ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶೇಖರ್ ಅವರ ಪ್ರಯತ್ನದಿಂದ ಆಶ್ರಮ ಶಾಲೆಗಳ 20 ವಿದ್ಯಾರ್ಥಿಗಳು ನವೋದಯ ಪರೀಕ್ಷೆಯನ್ನು ಎದುರಿಸಿದ್ದು, ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಅದರಂತೆ 55 ವಿದ್ಯಾರ್ಥಿಗಳು ಈ ಸಾಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾಗದ್ದಾರೆ.
ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.