ಕರಿಕೆ, ಜೂ. 12: ಸಂಪಾಜೆ ಅರಣ್ಯ ವಲಯದ ಸಸ್ಯ ಕ್ಷೇತ್ರದಲ್ಲಿ ಸುಮಾರು ಇಪ್ಪತ್ತಾರು ವಿವಿಧ ಜಾತಿಯ ಸಸ್ಯಗಳು ಅರಣ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ವಿತರಿಸಲು ಸಿದ್ದವಾಗಿ ನಿಂತಿದೆ.

ಹಲಸು, ರಾಮಪತ್ರೆ, ಕಾಡು ಬಾದಾಮಿ, ಪಣಪುಳಿ, ಗಂಧ, ರಕ್ತ ಚಂದನ, ಕಿರಾಲ್ ಬೋಗಿ, ನೇರಳೆ, ಬೆತ್ತ, ಬಳಂಜಿ, ಮಹಾಗನಿ, ಜಂಬುನೇರಳೆ, ಸೀಮಾ ರೂಬ, ಜಾಯಿಕಾಯಿ, ದೇವದಾರು, ಹೆಬ್ಬಲಸು, ನಕ್ಷತ್ರ ಹಣ್ಣು, ಮಾವು, ಹೊಳೆಮತ್ತಿ, ಕೊಟ್ಟೆ, ಬೈನೆ ಸೇರಿದಂತೆ ಅನೇಕ ಜಾತಿಯ ಸಸ್ಯಗಳು ತಯಾರಿದ್ದು, ಇದೀಗ ವಿತರಿಸಲು ಪ್ರಾರಂಭ ಮಾಡಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭಿಸಿ ಸುಮಾರು ಆರು ತಿಂಗಳು ಹದಿನೈದು ಸಿಬ್ಬಂದಿ ನಿರಂತರವಾಗಿ ದುಡಿದು ಈ ಗಿಡಗಳನ್ನು ಆರೈಕೆ ಮಾಡಿದ್ದಾರೆ. ಒಂದು ಗಿಡಕ್ಕೆ ಅಂದಾಜು ಮೂವತ್ತು ರೂಪಾಯಿಗಳ ವೆಚ್ಚ ತಗಲುತ್ತಿದ್ದು ಸಾರ್ವಜನಿಕರಿಗೆ ಮೂರು ರೂಪಾಯಿಗಳಲ್ಲಿ ವಿತರಿಸಲಾಗುತ್ತಿದೆ. ಕೊಡಗಿನ ರೈತರು ತಮ್ಮ ಜಮೀನಿನ ಪಹಣಿಪತ್ರ ಹಾಗೂ ಆಧಾರ್ ಪ್ರತಿಯನ್ನು ನೀಡಿ ಗಿಡಗಳನ್ನು ಪಡೆದು ಕೊಳ್ಳಬಹುದೆಂದು ಸಂಪಾಜೆ ವಲಯ ಅರಣ್ಯಾಧಿಕಾರಿ ಶಮಾ ಮಾಹಿತಿ ನೀಡಿದ್ದಾರೆ.