ಮಡಿಕೇರಿ, ಜೂ. 11: ಲೋಕಸಭಾ ಚುನಾವಣಾ ಅಧ್ಯಕ್ಷರಾಧಿಯಾಗಿ ಕರ್ತವ್ಯದಲ್ಲಿದ್ದ ಶಿಕ್ಷಕರು, ಅಸ್ವಸ್ಥರಾಗಿ ಕುಸಿದು ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದು, ಇವರ ಚಿಕಿತ್ಸಾ ವೆಚ್ಚವನ್ನು ಭರಿಸಿಕೊಡುವಂತೆ ವಿವಿಧ ಶಿಕ್ಷಕರ ಸಂಘದವರು ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಹಾತೂರು ಪ್ರೌಢಶಾಲೆ ಸಹಶಿಕ್ಷ ಅಪ್ಪಣ್ಣ ಕೆ.ಎಂ. ಅವರು ಮತಗಟ್ಟೆ ಸಂಖ್ಯೆ 164 ಮಹಿಳಾ ಸಮಾಜ ಕಟ್ಟಡ ಕುಶಾಲನಗರ ಇಲ್ಲಿ ಅಧ್ಯಕ್ಷಾಧಿ ಕಾರಿಯಾಗಿ ಕಾರ್ಯನಿರ್ವ ಹಿಸುತ್ತಿದ್ದಾಗ ತಾ. 18 ರ ಮಧ್ಯಾಹ್ನ 12 ಗಂಟೆಗೆ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ದಾಖಲಾಗಿ ರುತ್ತಾರೆ. ಈವರೆಗೂ ಅವರ ಚಿಕಿತ್ಸಾ ವೆಚ್ಚ ರೂ. 9 ಲಕ್ಷ ಆಗಿದ್ದು, ಅವರ ಪತ್ನಿ ಲೀಲಾವತಿಯವರು ವೈಯಕ್ತಿಕವಾಗಿ ಸಾಲ ಮಾಡಿ ಹಣ ವ್ಯಯ ಮಾಡಿರುತ್ತಾರೆ. ಇನ್ನು ಮುಂದೆ ಅವರು ಆರ್ಥಿಕವಾಗಿ ಚಿಕಿತ್ಸಾ ವೆಚ್ಚವನ್ನು ಭರಿಸಲು ಅಸಹಾಯಕ ರಾಗಿರುತ್ತಾರೆ. ಅಪ್ಪಣ್ಣ ಅವರು 2 ತಿಂಗಳು ಕನಿಷ್ಟ ಆಸ್ಪತ್ರೆಯಲ್ಲಿದ್ದರೆ ಗುಣಮುಖರಾಗುವ ಆಶಯವನ್ನು ವೈದ್ಯರು ವ್ಯಕ್ತಪಡಿಸಿರುತ್ತಾರೆ.

ಆದರೆ ಇವರಿಗೆ ಆಸ್ಪತ್ರೆ ಖರ್ಚನ್ನು ಭರಿಸಲು ಸಾಧ್ಯವಾಗದೆ ಅವರನ್ನು ಮನೆಗೆ ಕರೆದುಕೊಂಡು ಬರುವ ಬಗ್ಗೆ ಕುಟುಂಬಸ್ಥರು ನಿರ್ಧರಿಸಿದ್ದು, ಒಂದು ವೇಳೆ ಮನೆಗೆ ಕರೆದುಕೊಂಡು ಬಂದಲ್ಲಿ ಮನೆಗೆ ಬಂದ ಒಂದೆರೆಡು ದಿನಗಳಲ್ಲಿ ಜೀವಕ್ಕೆ ಹಾನಿಯಾಗುವ ಸಂಭವವಿದೆ. ಇದಕ್ಕೆ ಚುನಾವಣಾ ಆಯೋಗವು ನೇರ ಹೊಣೆಯಾಗಲಿದೆ. ಅಲ್ಲದೆ 59 ವರ್ಷ ವಯೋಮಾನದ ನಿವೃತ್ತಿ ಅಂಚಿನಲ್ಲಿರುವ ಇವರನ್ನು ಕರ್ತವ್ಯಕ್ಕೆ ನಿಯೋಜಿಸಿ ಕೊಂಡಿರುವದು ಸಹ ತಪ್ಪಾಗಿರುತ್ತದೆ.

ಈ ಹಿನ್ನೆಲೆ ಜಿಲ್ಲಾಧಿಕಾರಿ ತುರ್ತಾಗಿ ಕ್ರಮವನ್ನು ಕೈಗೊಳ್ಳಬೇಕಾಗಿ ಮನವಿಯಲ್ಲಿ ವಿವರಿಸಿಕೊಂಡಿದ್ದಾರೆ.

ಈ ಸಂದರ್ಭ ಕೆ.ಬಿ. ರವಿ, ಅಧ್ಯಕ್ಷರು ಸರಕಾರಿ ನೌಕರ ಸಂಘ ಕೊಡಗು ಜಿಲ್ಲೆ, ಸಿ.ಟಿ. ಸೋಮ ಶೇಖರ ಅಧ್ಯಕ್ಷರು, ಕ.ರಾ.ಪ್ರಾ.ಶಾ. ಸ.ಶಿ. ಸಂಘ, ಕೊಡಗು ಜಿಲ್ಲೆ, ಪಿಲಿಪ್ ವಾಸ್, ಅಧ್ಯಕ್ಷರು, ಉಪನ್ಯಾಸಕರ ಸಂಘ ಕೊಡಗು, ಪ್ರಭುಕುಮಾರ್, ಅಧ್ಯಕ್ಷರು, ಅನುದಾನಿತ ನೌಕರರ ಸಂಘ, ಕೊಡಗು, ಡಿ.ಪಿ. ಧರ್ಮಪ್ಪ, ಅಧ್ಯಕ್ಷರು, ಕ.ರಾ.ಪ್ರಾ.ಶಾ.ಸ.ಶಿ. ಸಂಘ, ಸೋಮವಾರಪೇಟೆ, ಎಸ್.ಡಿ. ಅನಿತಾ, ಖಜಾಂಚಿ, ಮಡಿಕೇರಿ, ಎಂ.ಕೆ. ರೋಹಿತ್, ಅಧ್ಯಕ್ಷರು, ಅನುದಾನಿತ ನೌಕರರ ಸಂಘ, ವೀರಾಜಪೇಟೆ ಅವರುಗಳು ಹಾಜರಿದ್ದರು.