ನಾಪೋಕ್ಲು, ಜೂ. 12: ಗ್ರಾಮದ ಅಭಿವೃದ್ಧಿಗೆ ಸಹಕಾರ ಸಂಘಗಳ ಪಾತ್ರ ಮಹತ್ತರವಾಗಿದ್ದು, ಈ ನಿಟ್ಟಿನಲ್ಲಿ ಪೂರ್ವಜರು ಶ್ರಮ ವಹಿಸಿ ಕಟ್ಟಿ ಬೆಳೆಸಿದ ಸಹಕಾರ ಸಂಘವನ್ನು ಉನ್ನತೀಕರಣಗೊಳಿಸಲು ಗ್ರಾಮಸ್ಥರು ಸರ್ವ ರೀತಿಯ ಸಹಕಾರ ನೀಡ ಬೇಕೆಂದು ನಂ. 91ನೇ ಬೇತು ಸಹಕಾರ ಸಂಘದ ಅಧ್ಯಕ್ಷರು ಹಾಗೂ ನಿವೃತ್ತ ವಾಯುದಳ ಅಧಿಕಾರಿ ಕೊಂಡೀರ ನಾಣಯ್ಯ ಸಲಹೆ ನೀಡಿದ್ದಾರೆ.

ಪುನರ್ ನಿರ್ಮಾಣಗೊಂಡ ಬೇತು ಗ್ರಾಮದ ನಂ-91ನೇ ಬೇತು ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಆಸ್ತಿಯನ್ನು ಸಂರಕ್ಷಿಸುವ ಹೊಣೆ ಎಲ್ಲರದ್ದಾಗಿದೆ. ಕಳೆದ 22 ವರ್ಷಗಳಿಂದ ಸ್ಥಗಿತಗೊಂಡಿದ್ದ ಸಹಕಾರ ಸಂಘ ಗ್ರಾಮಸ್ಥರ ಮುತುವರ್ಜಿಯಿಂದ ಮತ್ತೆ ಕಾರ್ಯಾರಂಭಗೊಂಡಿದ್ದು, ಸಂಘವು ಪ್ರಸ್ತುತ 162 ಸದಸ್ಯರನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹಕಾರ ನೀಡ ಬೇಕೆಂದು ಮನವಿ ಮಾಡಿದರು ಗ್ರಾಮಸ್ಥರ ಸಹಕಾರ ಮತ್ತು ಸಲಹೆ ಸೂಚನೆಗಳನ್ನು ಪಡೆಯುವ ಮೂಲಕ ಸಹಕಾರ ಸಂಘವನ್ನು ಹಂತ ಹಂತವಾಗಿ ಅಭಿವೃದ್ಧಿ ಪಥದತ್ತ ಮುನ್ನೆಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವದೆಂದು ತಿಳಿಸಿದರು.

ವಾರ್ಷಿಕ ಸಭೆಯಲ್ಲಿ ಸಂಘದ ಅಭಿವೃದ್ಧಿ ಕುರಿತಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು. ಸಂಘದಲ್ಲಿ ಮರಣ ನಿಧಿ ಸ್ಥಾಪಿಸುವದು, ಸಮುದಾಯ ಭವನ ನಿರ್ಮಾಣ, ಸದಸ್ಯರಿಗೆ ಸಾಲ ಸೌಲಭ್ಯ ನೀಡುವದು, ಸಿಬ್ಬಂದಿಗಳ ನಿಯೋಜನೆ ಸೇರಿದಂತೆ ಇನ್ನಿತರ ಸಲಹೆ ಸೂಚನೆಗಳಿಗೆ ಒಪ್ಪಿಗೆ ನೀಡಲಾಯಿತು. ಮರಣಹೊಂದಿದ ಸಂಘದ ಸದಸ್ಯರಾದ ಕೀಕಂಡ ಕುಟ್ಟಪ್ಪ, ಚೋಕಿರ ಬೆಳ್ಯವ್ವ ಅವರ ನಿಧನಕ್ಕೆ ಮೌನಾಚರಿಸುವ ಮೂಲಕ ಸಂತಾಪ ಸೂಚಿಸಲಾಯಿತು. ವೇದಿಕೆಯಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹಾಗೂ ಸಂಘದ ನಿರ್ದೇಶಕ ಕಾಳೆಯಂಡ ಸಾಬ ತಿಮ್ಮಯ್ಯ, ಕುಟ್ಟಂಜೆಟ್ಟೀರ ಬೋಪಣ್ಣ, ಕೊಂಡಿರ ಸುರೇಶ್ ನಂಜಪ್ಪ, ಚೋಕಿರ ಪ್ರಭು ಪೂವಪ್ಪ, ಬೊಳ್ಯಪಂಡ ಜಾನು ಪೂಣಚ್ಚ, ಪಾತಂಡ ಜಗದೀಶ್, ಮುಕ್ಕಾಟಿರ ರೋಹಿಣಿ ಲಿಂಗಪ್ಪ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಕಲ್ಯಾಟಂಡ ರಮೇಶ್ ಚಂಗಪ್ಪ ಸ್ವಾಗತಿಸಿ, ಕಾರ್ಯದರ್ಶಿ ಬೊಳ್ಯಪಂಡ ಪೆಮ್ಮಯ್ಯ ವರದಿ ವಾಚಿಸಿದರು, ಬೊಳ್ಯಪಂಡ ಹರೀಶ್ ಕಾರ್ಯಕ್ರಮ ನಿರೂಪಿಸಿ, ರಮೇಶ್ ಚಂಗಪ್ಪ ವಂದಿಸಿದರು. -ದುಗ್ಗಳ