ಸೋಮವಾರಪೇಟೆ, ಜೂ. 12: ಯುವ ಒಕ್ಕೂಟದ ಕಾರ್ಯಕ್ರಮ ಗಳನ್ನು ನಡೆಸಬೇಕಾದ ಜಿಲ್ಲಾ ಯುವ ಒಕ್ಕೂಟದ ಭವನವನ್ನು ಶೀಘ್ರದಲ್ಲಿ ಹಸ್ತಾಂತರಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್ ಎಚ್ಚರಿಕೆ ನೀಡಿದರು.
ಇಲ್ಲಿನ ತಾಲೂಕು ಯುವ ಒಕ್ಕೂಟದ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ಸರಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದರಿಂದಾಗಿ ಯುವ ಒಕ್ಕೂಟದ ಯಾವದೇ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಯುವ ಭವನದಲ್ಲಿ ಮಹಿಳಾ ಕಾಲೇಜು ನಡೆಯುತ್ತಿದ್ದು ತಕ್ಷಣವೇ ಅದನ್ನು ತೆರವುಗೊಳಿಸಲು ಸಂಬಂಧಿಸಿದವರು ಮುಂದಾಗಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಚಂದ್ರಿಕ ಗಣಪತಿ ಮಾತನಾಡಿ, ಸೋಮವಾರಪೇಟೆ ತಾಲೂಕು ಯುವ ಒಕ್ಕೂಟಕ್ಕೆ ಕಚೇರಿ ಒದಗಿಸಿಕೊಡಬೇಕೆಂದು ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಹಲವು ಮಳಿಗೆಗಳು ಮತ್ತು ಸರಕಾರಿ ಇಲಾಖೆಗೆ ಸೇರಿದ ಕೆಲವು ಕಚೇರಿಗಳು ಖಾಲಿ ಇದ್ದು ತಕ್ಷಣವೇ ಯಾವದಾದರು ಒಂದು ಕಚೇರಿಯನ್ನು ನೀಡಲು ಸಂಬಂಧಿಸಿದವರು ಕ್ರಮ ವಹಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಕಾರ್ಯದರ್ಶಿ ಬಿ.ಬಿ ಆದರ್ಶ, ಉಪಾಧ್ಯಕ್ಷರಾದ ಹೆಚ್.ಕೆ ಮಹೇಶ್, ಪದಾಧಿಕಾರಿಗಳಾದ ಮೀರÀ ರಾಜೇಂದ್ರ, ವಿಜಯ್ ಕುಮಾರ್, ಅಶ್ವಿನಿ, ಕುಶಾಲಪ್ಪ, ಕುಮಾರ್ ಉಪಸ್ಥಿತರಿದ್ದರು.