ಸೋಮವಾರಪೇಟೆ, ಜೂ. 12: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರೇಕೊಪ್ಪ, ಬಸವನಳ್ಳಿ ಗ್ರಾಮಗಳಲ್ಲಿ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದು, ತಪ್ಪಿದ್ದಲ್ಲಿ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರಾದ ಮಂಜು ಮಾತನಾಡಿ, ಕಳೆದ ಎಂಟು ದಿನಗಳಿಂದ ಈ ಭಾಗದಲ್ಲಿ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಟವರ್‍ನ ನಿರ್ವಹಣಾ ಕಚೇರಿಗೆ ಬೀಗ ಜಡಿಯಲಾಗಿದೆ. ಇದರಿಂದ ಈ ಭಾಗದಲ್ಲಿ ಸಾಕಷ್ಟು ತೊಂದರೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ನಿರ್ಲಕ್ಷ್ಯದ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಟವರ್ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಲಾಗಿದೆ. ಇವರ ಸಂಬಳ ಪಾವತಿಸುತ್ತಿಲ್ಲ, ಡೀಸೆಲ್‍ಗೆ ಹಣ ನೀಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಆದುದರಿಂದ ಸಂಬಂಧಿಸಿದವರು ಕೂಡಲೇ ಸಮಸ್ಯೆಯನ್ನು ಬಗೆಹರಿಸ ಬೇಕೆಂದು ಆಗ್ರಹಿಸಿ ದೂರವಾಣಿ ಇಲಾಖೆಯ ಇಂಜಿನಿಯರ್‍ರಿಗೆ ಸೋಮವಾರ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿದ ಬಿಎಸ್‍ಎನ್‍ಎಲ್ ಗ್ರಾಮೀಣ ವಿಭಾಗದ ಕಿರಿಯ ಇಂಜಿನಿಯರ್ ಶ್ರೀನಿವಾಸ್ ಮಾತನಾಡಿ, ಈಗಾಗಲೇ ಕಾರೇಕೊಪ್ಪ ಬಸವನಳ್ಳಿ ಮೊಬೈಲ್ ಟವರ್ ಜಿಎಸ್‍ಟಿ ಕಂಪೆನಿಗೆ ವಹಿಸಲಾಗಿದೆ. ಬಿಎಸ್‍ಎನ್‍ಎಲ್ ನಿಂದ ನಿರ್ವಹಣೆಗೆ ಹಣ ಪಾವತಿಯಾಗಿಲ್ಲ ಎಂದು ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ. ಹಣ ಪಾವತಿಯಾದ ತಕ್ಷಣ ಕೆಲಸ ಪ್ರಾರಂಭಿಸಲಾಗುವದು ಎಂದರು.

ಈ ಸಂದರ್ಭ ಗ್ರಾಮಸ್ಥರಾದ ಕೆ.ಎನ್. ಶರತ್‍ಕುಮಾರ್, ಮಂಜುನಾಥ್, ಕೆ.ಎ. ಪೂವಯ್ಯ, ಕೆ.ಈ. ರಾಜು, ನವೀನ, ನಾಗೇಶ್, ರವಿ, ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.