ಸೋಮವಾರಪೇಟೆ, ಜೂ. 12: ಕಳೆದ ಮಳೆಗಾಲದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಲವಷ್ಟು ರೈತರು ಸಂತ್ರಸ್ತರಾಗಿದ್ದು, ಇವರಿಗೆ ನ್ಯಾಯಯುತವಾಗಿ ಪರಿಹಾರ ವಿತರಿಸಲು ತಾಲೂಕು ಮಟ್ಟದಲ್ಲಿ ಅದಾಲತ್ ನಡೆಸಲು ಜಿಲ್ಲಾಧಿಕಾರಿ ಕ್ರಮ ವಹಿಸಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಭೂಮಿ ಹಾಗೂ ಕೃಷಿ ಉತ್ತನ್ನಗಳು ನಷ್ಟವಾಗಿದ್ದರೂ, ಇಂದಿಗೂ ರೈತರಿಗೆ ಸರ್ಕಾರದಿಂದ ಪರಿಹಾರ ವಿತರಣೆಯಾಗಿಲ್ಲ. 2017-18ನೇ ಸಾಲಿನ ಮಳೆ ಅವಧಿಯಲ್ಲಿ ಶೇ. 80ರಷ್ಟು ಬೆಳೆ ಹಾನಿಯಾಗಿದೆ. ಸಾಕಷ್ಟು ಕೃಷಿ ಭೂಮಿ ನಾಶವಾಗಿದೆ. ಆದರೂ, ಸರ್ಕಾರ ಪರಿಹಾರ ವಿತರಿಸಲು ಮುಂದಾಗಿಲ್ಲ ಎಂದು ದೂರಿದರು.

ರೈತರು ಕಂದಾಯ ಇಲಾಖೆಗೆ ನೀಡಿದ ಪರಿಹಾರದ ಅರ್ಜಿಗಳ ಮಾಹಿತಿಯನ್ನು ಕಂಪ್ಯೂಟರೀಕರಣ ಮಾಡುವ ಸಂದರ್ಭ ಸಾಕಷ್ಟು ಲೋಪದೋಷವಾಗಿದ್ದು, ಇದನ್ನು ಸರಿಪಡಿಸುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಮೇ ತಿಂಗಳ ಅಂತ್ಯದಲ್ಲಿ ಅದಾಲತ್ ನಡೆಸಿದ್ದಾರೆ. ಆದರೆ, ಇದರ ಮಾಹಿತಿ ಇಲ್ಲದ ಜಿಲ್ಲೆಯ ಹೆಚ್ಚಿನ ರೈತರು ಅದಾಲತ್‍ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದುದರಿಂದ ಪ್ರತೀ ತಾಲೂಕು ಕೇಂದ್ರದಲ್ಲಿ ಮತ್ತೊಮ್ಮೆ ಅದಾಲತ್ ನಡೆಸಿ ನಷ್ಟಕ್ಕೊಳಗಾದ ರೈತರಿಂದ ಮಾಹಿತಿ ಪಡೆದು ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಚುನಾವಣೆಗೂ ಮುನ್ನ ಸರ್ಕಾರ ದಾಖಲಾತಿ ಇಲ್ಲದ ಕೃಷಿ ಭೂಮಿಯ ಸಕ್ರಮಕ್ಕೆ ನಂ. 57ರಲ್ಲಿ ಅರ್ಜಿಯನ್ನು ಸ್ವೀಕರಿಸಿದ್ದು, ನಂತರ ಲೋಕಸಭಾ ಚುನಾವಣೆ ಬಂದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಯಿತು. ಇಂದಿಗೂ ಹೆಚ್ಚಿನ ರೈತರಿಗೆ ನಂ. 57ರಲ್ಲಿ ಅರ್ಜಿ ನೀಡಲು ಸಾಧ್ಯವಾಗಿಲ್ಲ. ಆದುದರಿಂದ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು. ಅಲ್ಲದೆ, ಈ ಹಿಂದೆ ಸ್ವೀಕರಿಸಿದ ಫಾರಂ 53ರ ಅರ್ಜಿಗಳನ್ನು ಆದಷ್ಟು ಬೇಗ ಸಮಿತಿ ರಚಿಸಿ ವಿಲೇವಾರಿ ಮಾಡಬೇಕೆಂದು ಆಗ್ರಹಿಸಿದರು.

ಸಮಿತಿಯ ನಿರ್ದೇಶಕ ಎಸ್.ಎಂ. ಡಿಸಿಲ್ವಾ ಮಾತನಾಡಿ, ಜಿಲ್ಲೆಯಲ್ಲಿ ಮಳೆಗಾಲಕ್ಕೂ ಮುನ್ನ ಭಾರೀ ವಾಹನ, ಮರಗಳ ಸಾಗಾಟವನ್ನು ನಿಷೇಧಿಸಿದ್ದು, ಇದರಿಂದಾಗಿ ತೋಟದಲ್ಲಿದ್ದ ಸಿಲ್ವರ್ ಮರ ಕಡಿದು ಸಾಗಾಟ ಮಾಡಲು ತೊಡಕಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಮರದಿಂದ ಬರುವ ಆದಾಯವನ್ನೇ ನೆಚ್ಚಿಕೊಂಡಿರುವ ಹಲವು ರೈತರಿಗೆ ಕಷ್ಟವಾಗಿದ್ದು, ಪೂರ್ಣ ಪ್ರಮಾಣದ ಮಳೆ ಪ್ರಾರಂಭವಾಗುವವರೆಗೆ ಮರ ಸಾಗಾಟ ಮಾಡಲು ಜಿಲ್ಲಾಧಿಕಾರಿಗಳು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಎಂ. ಲವ, ಕಾರ್ಯದರ್ಶಿ ಎಸ್.ಪಿ. ಪ್ರಕಾಶ್, ಪದಾಧಿಕಾರಿಗಳಾದ ಬಿ.ಜಿ. ಪೂವಮ್ಮ, ಎನ್.ಎನ್. ಬೋಪಣ್ಣ ಉಪಸ್ಥಿತರಿದ್ದರು.