*ಗೋಣಿಕೊಪ್ಪಲು, ಜೂ. 11 : ತಾಲೂಕು ದಂಡಾಧಿಕಾರಿ ತಾ.ಪಂ. ಸಾಮಾನ್ಯ ಸಭೆಗಳಿಗೆ ಹಾಜರಾಗುತ್ತಿಲ್ಲ ಎಂದು ಸಾಮಾನ್ಯ ಸಭೆಯನ್ನೇ ಬಹಿಷ್ಕರಿಸಿ ಸರ್ವ ಸದಸ್ಯರು ಹೊರನಡೆದ ಘಟನೆ ವೀರಾಜಪೇಟೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು. ತಹಶೀಲ್ದಾರ್ ಗೋವಿಂದರಾಜು ಸಾಮಾನ್ಯ ಸಭೆಗಳಿಗೆ ನಿರಂತರ ಗೈರು ಹಾಜರಾಗುತ್ತಿದ್ದಾರೆ. ಹೀಗಾಗಿ ತಾಲೂಕಿನ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿದೆ. ಮಳೆಗಾಲದ ಮುಂಜಾಗೃತಾ ಕ್ರಮವಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸಬೇಕಾಗಿತ್ತು. ಆದರೆ ಸಮಸ್ಯೆ ಬಗೆಹರಿಸಲು ಮುಖ್ಯವಾಗಿ ಬೇಕಾದ ತಹಶೀಲ್ದಾರ್ ಗೈರಿನಿಂದ ಸಭೆಯು ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಹೀಗಾಗಿ ಸಾಮಾನ್ಯ ಸಭೆಗೆ ತಹಶೀಲ್ದಾರ್ ಹಾಜರಾಗಲೇಬೇಕು ಎಂದು ಸದಸ್ಯರು ಒತ್ತಾಯಿಸಿದರು. ಪೆÇನ್ನಂಪೇಟೆ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ಕಂದಾಯ ಇಲಾಖೆಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ಬಹಳಷ್ಟು ಸದಸ್ಯರಿಗೆ ಪ್ರಶ್ನಿಸಬೇಕಾಗಿತ್ತು. ಅಲ್ಲದೆ ಕಳೆದ ಬಾರಿಯ ಅತಿವೃಷ್ಟಿಯಿಂದ ಉಂಟಾದ ಮಳೆಹಾನಿ ಪರಿಹಾರ, ಪಡಿತರ ಚೀಟಿ ವಿತರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿತ್ತು. ಆದರೆ ಸಮಸ್ಯೆ ಬಗೆಹರಿಸಲು ತಾಲೂಕು ದಂಡಾಧಿಕಾರಿಗಳೇ ಗೈರು ಹಾಜರಾಗಿದ್ದರಿಂದ ಅಸಮಾಧಾನ ಗೊಂಡ ತಾ.ಪಂ. ಸದಸ್ಯರು ಸಭೆಯನ್ನು ಮುಂದೂಡುವಂತೆ ಅಧ್ಯಕ್ಷರಲ್ಲಿ ಮನವಿ ಸಲ್ಲಿಸಿದರು. ತಕ್ಷಣವೇ ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ಕಾರ್ಯನಿರ್ವಹಣಾಧಿಕಾರಿಗಳ ಮೂಲಕ ತಹಶೀಲ್ದಾರ್ ಅವರಿಗೆ ಸಭೆಗೆ ಹಾಜರಾಗವಂತೆ ತಿಳಿಸಲು ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಘಟನೆಯಿಂದ ಮತ್ತಷ್ಟು ಅಸಮಾಧಾನಗೊಂಡ ಸದಸ್ಯರು ಸಭೆಯನ್ನು ಮುಂದೂ ಡುವಂತೆ ಒತ್ತಾಯಿಸಿದರು. ನಂತರ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಜಿಲ್ಲಾ ಉಪವಿಭಾಗಾಧಿಕಾರಿ ಯವರಿಗೆ ದೂರವಾಣಿ ಕರೆ ಮಾಡಿ ತಹಶೀಲ್ದಾರ್ ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದಾರೆ. ಸದಸ್ಯರು ಅವರ ಹಾಜರಾತಿಯನ್ನು ಬಯಸಿ ಒತ್ತಾಯಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಆದರೂ ತಹಶೀಲ್ದಾರ್ ಸಭೆಗೆ ಹಾಜರಾಗದ ಕಾರಣ ಸಭೆಯನ್ನು ಸರ್ವ ಸದಸ್ಯರು ಬಹಿಷ್ಕರಿಸಿದರು.
(ಮೊದಲ ಪುಟದಿಂದ) ಒಟ್ಟು 19 ಮಂದಿ ಸದಸ್ಯರುಗಳ ಪೈಕಿ ಆಡಳಿತಾರೂಢ ಬಿಜೆಪಿಯ 12 ಮಂದಿ ಹಾಗೂ ಕಾಂಗ್ರೆಸ್‍ನ 6 ಮಂದಿ ಬಹಿಷ್ಕರಿಸಿದರು. ಓರ್ವ ಕಾಂಗ್ರೆಸ್ ಸದಸ್ಯ ಸಭೆಗೆ ಗೈರಾಗಿದ್ದರು. ಪಕ್ಷಾತೀತವಾಗಿ ಸಭೆಯನ್ನು ಬಹಿಷ್ಕರಿಸಿದುದು ವಿಶೇಷವಾಗಿತ್ತು.
ಈ ಸಂದರ್ಭ ಮಾತನಾಡಿದ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಮುಂದಿನ 17ರಂದು ಸಾಮಾನ್ಯ ಸಭೆ ನಡೆಯಲಿದೆ. ಅಂದು ತಹಶೀಲ್ದಾರ್ ಅವರನ್ನು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗುತ್ತದೆ, ಕಾರ್ಯ ನಿರ್ವಹಣಾಧಿಕಾರಿಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ತಹಶೀಲ್ದಾರ್ ಕಂದಾಯ ಇಲಾಖೆಯ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೂ ಜನತೆಯಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರು ಬಂದಿದೆ. ಕಚೇರಿಯಲ್ಲಿ ಯಾವದೇ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುತ್ತಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
ಸದಸ್ಯರುಗಳಾದ ಕುಟ್ಟಂಡ ಅಜಿತ್ ಕರುಂಬಯ್ಯ, ಮಾಳೆಟ್ಟಿರ ಪ್ರಶಾಂತ್, ಪಲ್ವಿನ್ ಪೂಣಚ್ಚ ಸೇರಿದಂತೆ ಹಲವು ಸದಸ್ಯರುಗಳು ತಹಶೀಲ್ದಾರ್ ವಿರುದ್ಧ ಅಸಮಾದಾನ ವ್ಯಕ್ತಪಡಿಸಿದರು. ಸಭೆ ಪ್ರಾರಂಭಕ್ಕೂ ಮುನ್ನ ಎರಡನೇ ಬಾರಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಹಾಗೂ ಅವರ ಸರ್ಕಾರಕ್ಕೆ ಅಭಿನಂದಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜನಿತ್, ಸರ್ವ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.