ಗೋಣಿಕೊಪ್ಪ ವರದಿ, ಜೂ. 8 : 25 ವರ್ಷ ಪೂರೈಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿರುವ ಬೊಳ್ಳಿನಮ್ಮೆಗೆ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಚಾಲನೆ ನೀಡಲಾಯಿತು. ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಆಚಾರ-ವಿಚಾರಗಳ ಅಭಿಪ್ರಾಯ, ಕಲಾ ಪ್ರದರ್ಶನದ ಮೂಲಕ ಅಕಾಡೆಮಿ ಉದ್ದೇಶಿತ ಕಾರ್ಯಕ್ರಮಗಳನ್ನು ಬಿಂಬಿಸಲಾಯಿತು. ಕಾಲೂರು ಮುತ್ತ್‍ನಾಡ್ ಅಭಿಮಾನಿ ಒಕ್ಕೂಟದಿಂದ ತಾಲಿಪಾಟ್, ತೋರ ಪೊಮ್ಮಕ್ಕಡ ಸಾಂಸ್ಕøತಿಕ ಕಲಾತಂಡದಿಂದ ಉರ್‍ಟಿಕೊಟ್ಟ್ ಆಟ್, ಮೂರ್ನಾಡ್ ಐರಿ ಸಮಾಜದಿಂದ ಬಾಳೋಪಾಟ್, ಬಾವಲಿ ಅಯ್ಯಪ್ಪದೇವ ತಂಡದಿಂದ ತಾಲಿಪಾಟ್, ಮುಕ್ಕೋಡ್ಲು ವ್ಯಾಲಿಡ್ಯೂ ಕಲ್ಚರಲ್ ಅಸೋಸಿಯೇಷನ್ ತಂಡದಿಂದ ಕತ್ತಿಯಾಟ್, ಟಿ. ಶೆಟ್ಟಿಗೇರಿ ಸಂಭ್ರಮ ಪೊಮ್ಮಕ್ಕಡ ತಂಡದಿಂದ ಉಮ್ಮತ್ತಾಟ್, ಹುದಿಕೇರಿ ಮಹಾದೇವ ಆಮಕ್ಕಡ ಕೂಟದಿಂದ ಕೋಲಾಟ್, ಪರೆಯಕಳಿ, ಮುಕ್ಕೋಡ್ಲು ಪಾಟ್‍ಕಾರ ತಂಡದಿಂದ ದುಡಿಕೊಟ್ಟ್ ಪಾಟ್ ಪ್ರದರ್ಶನಗೊಂಡಿತು. ಪುಸ್ತಕ ಹಾಗೂ ವಸ್ತು ಪ್ರದರ್ಶನ ನಡೆಯಿತು.ಪಾಲಿಬೆಟ್ಟ ರಸ್ತೆ ಜಂಕ್ಷನ್‍ನಿಂದ ಆರಂಭಗೊಂಡ ಸಾಂಸ್ಕøತಿಕ ಮೆರವಣಿಗೆಗೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಗಾಳಿಗೆ ಗುಂಡು ಹೊಡೆಯುವ ಮೂಲಕ ಚಾಲನೆ ನೀಡಿದರು. ಬೀಕಚಂಡ ನಂಜಪ್ಪ ಮತ್ತು ತಂಡ ತೆರೆ ಮತ್ತು ಚಂಡೆಮೇಳ, ಎಚ್. ಕೆ. ಸುಬ್ರಮಣಿ ಹಾಗೂ ತಂಡ ಕಾಪಳಕಳಿ, ಮುಖ್ಯರಸ್ತೆಯಲ್ಲಿ ಸಾಂಸ್ಕøತಿಕ ಮೆರವಣಿಗೆ ಗಮನ ಸೆಳೆಯಿತು.

ಉದ್ಘಾಟನೆ : ಬೊಳ್ಳಿನಮ್ಮೆ ಸಭಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಉದ್ಘಾಟಿಸಿದರು. ನಂತರ ಮಾತನಾಡಿ, ಭಾಷೆ ರಕ್ಷಣೆಯ ಚಿಂತನೆಯಲ್ಲಿ ಭಾಷಾ ಅಕಾಡೆಮಿ ಸ್ಥಾಪನೆಗೆ ಕಾರಣವಾದ ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ ಅವರನ್ನು ಇಂದು ಎಲ್ಲರೂ ನೆನೆಯುವಂತಾಗಿದೆ. ಅಕಾಡೆಮಿ ಮೂಲಕ ಭಾಷೆ, ಕಲೆ, ಸಂಸ್ಕøತಿ, ಆಚಾರ-ವಿಚಾರ ರಕ್ಷಣೆ ಯಾಗುವಂತಾಗಿದೆ. ಇದರೊಂದಿಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದರು.

ಕಾವೇರಿ ನೀರು ಮೂಲಕ ರಾಜ್ಯಕ್ಕೆ ನೀರುಳಿಸುತ್ತಿರುವ ಕೊಡಗಿನ ಆಚರಣೆಯಲ್ಲಿ ಇದನ್ನು ವೀಕ್ಷಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಬೇಕಿತ್ತು. ಕೊಡಗಿನ ಜನತೆ ಮಳೆಯಿಂದ ತೊಂದರೆ ಅನುಭವಿಸಿ ಕೊಂಡು ಪರೋಪಕಾರಿಯಾಗಿ ಜೀವಿಸುತ್ತಿದ್ದಾರೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ರಾಜಕೀಯ ಬಿಟ್ಟು ಆಚರಣೆಯ ರಕ್ಷಣೆಗೆ ಎಲ್ಲಾ ಪಕ್ಷದವರು ಮುಂದಾಗಬೇಕು ಎಂದು ಅವರು ಹೇಳಿದರು.

ಶಾಸಕ ಕೆ. ಜಿ. ಬೋಪಯ್ಯ ಮಾತನಾಡಿ, ಕೊಡವ ಭಾಷೆ ಮಾತನಾಡಲು ಬರುವದಿಲ್ಲ ಎಂದು ಹೇಳಿಕೊಂಡು ಹೆಮ್ಮೆ ಪಡುವದನ್ನು ಕೊಡವ ಭಾಷಿಗರು ನಿಲ್ಲಿಸಬೇಕು. ಭಾಷೆಯನ್ನು ಹೆಚ್ಚು ಹೆಚ್ಚು ಬಳಕೆ ಮಾಡಿದಾಗ ಅದರ ಉಳಿವು ಸಾಧ್ಯವಿದೆ. ಕೊಡವ ಭಾಷೆ ಮಾತನಾಡಲು ಹಿಂದೇಟು ಬೇಡ ಎಂದರು.

ಬೆಂಗಳೂರು ಕೊಡವ ಸಮಾಜ ಅಧ್ಯಕ್ಷ ಮುಕ್ಕಾಟಿರ ನಾಣಯ್ಯ ಮಾತನಾಡಿ, ಕೊಡವರನ್ನು ಪರಿಶಿಷ್ಟ ಪಂಗಡ ಎಂದು ಕೊಡವರನ್ನು ದಾಖಲಿಸಬೇಕು ಎಂದು ಹೋರಾಟ ನಡೆಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಹೋರಾಟಕ್ಕೆ ಕೊಡವ ಸಮಾಜಗಳು ಬೆಂಬಲ ನೀಡಬೇಕಿದೆ. ಕೊಡವರ ಹಕ್ಕನ್ನು ಪಡೆದುಕೊಳ್ಳಲು ನಾವೆಲ್ಲರೂ ಒಂದಾಗಬೇಕಿದೆ ಎಂದು ಮನವಿ ಮಾಡಿಕೊಂಡರು.

ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಅಜ್ಜಿನಿಕಂಡ ಗಣಪತಿ ಮಾತನಾಡಿ, ಸಂಸ್ಕøತಿ ಉಳಿದರೆ ಮಾತ್ರ ಜನಾಂಗಕ್ಕೆ ಮಾನ್ಯತೆ ದೊರೆಯುತ್ತದೆ. ಈ ನಿಟ್ಟಿನಲ್ಲಿ ಭಾಷೆ, ಸಂಸ್ಕøತಿಯನ್ನು ಪೋಷಿಸಬೇಕು ಎಂದರು.

ಮೈಸೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಡಾ. ಕಳ್ಳಿಚಂಡ ಲಲಿತಾ ಮಾತನಾಡಿ, ಕೊಡವ ಸಂಸ್ಕøತಿಯನ್ನು ಬೇರೆ ಭಾಷಿಗರಿಗೆ ಅರ್ಥವಾಗುವಂತೆ ಬೇರೆ ಭಾಷೆಗಳಲ್ಲಿ ಕೂಡ ಮುಟ್ಟಿಸಲು ಸಾಧ್ಯವಿದೆ.

(ಮೊದಲ ಪುಟದಿಂದ) ಕೊಡವ ಭಾಷೆಯನ್ನು ವಿದೇಶಗಳಿಗೂ ತಲಪಿಸಿ., ಇಲ್ಲಿನ ಸಂಸ್ಕøತಿ, ಆಚಾರ-ವಿಚಾರಗಳನ್ನು ಅವರದೇ ಭಾಷೆಯಲ್ಲಿ ಅರ್ಥೈಸುವ ಯೋಜನೆಗೆ ಮುಂದಾಗಬೇಕು ಎಂದರು.

ಕೊಡವ ಸಮಾಜ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಮಾತನಾಡಿ, ಜನಾಂಗ ಉಳಿಯಬೇಕಾದರೆ ಮಕ್ಕಳೇ ಜನಾಂಗದ ಆಸ್ತಿ. ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವ ಮೂಲಕ ಜನಾಂಗ ಮುಂದುವರಿಯಲು ಕೈಜೋಡಿಸ ಬೇಕಾಗಿದೆ ಎಂದರು.

ಈ ಸಂದರ್ಭ ಜಿ. ಪಂ. ಸದಸ್ಯ ಸಿ. ಕೆ. ಬೋಪಣ್ಣ, ಕಾವೇರಿ ಕಾಲೇಜು ಸಿಇಓ ಮೂಕಳಮಾಡ ಮೊಣ್ಣಪ್ಪ, ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಉಪಸ್ಥಿತರಿದ್ದರು. ಆಂಗೀರ ಕುಸುಮ್ ಹಾಗೂ ಉಮೇಶ್ ಕೇಚಮಯ್ಯ ನಿರೂಪಿಸಿದರು.

ಚೇಂದೀರ ನಿರ್ಮಲ ಬೋಪಣ್ಣ, ಉಳುವಂಗಡ ಲೋಹಿತ್ ಭೀಮಯ್ಯ, ಆಂಗೀರ ಕುಸುಮ್ ಹಾಗೂ ಚೆಕ್ಕೇರ ಪಂಚಮ್ ತ್ಯಾಗರಾಜ್ ತಂಡ ನಾಡಗೀತೆ ಹಾಡಿದರು.

ಕೊಡವ ಅಕಾಡೆಮಿ ಸದಸ್ಯರುಗಳಾದ ಆಪಟ್ಟೀರ ಟಾಟು ಮೊಣ್ಣಪ್ಪ, ಅಜ್ಜಮಾಡ ಪಿ. ಕುಶಾಲಪ್ಪ, ಬೀಕಚಂಡ ಎಂ. ಬೆಳ್ಯಪ್ಪ, ತೋರೇರ ಎಂ. ಮುದ್ದಯ್ಯ, ನಾಳಿಯಮ್ಮಂಡ ಕೆ. ಉಮೇಶ್, ಆಂಗೀರ ಕುಸುಮ್, ಬೊಳ್ಳಜೀರ ಅಯ್ಯಪ್ಪ, ಹಂಚ್ಚೆಟ್ಟಿರ ಮನು ಮುದ್ದಪ್ಪ, ಸುಳ್ಳಿಮಾಡ ಭವಾನಿ ಕಾವೇರಿಯಪ್ಪ, ಹಂಚ್ಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಮನ್ನಕಮನೆ ಬಾಲಕೃಷ್ಣ, ಚಂಗುಲಂಡ ಸೂರಜ್, ಎಚ್. ಎ. ಗಣಪತಿ, ಕುಡಿಯರ ಶಾರದ ಪಾಲ್ಗೊಂಡಿದ್ದರು.

ಭಾನುವಾರದ ಕಾರ್ಯಕ್ರಮ : ತಾ. 9 ರಂದು (ಇಂದು) ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ನಿರ್ಮಿಸಿರುವ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ವೇದಿಕೆಯಲ್ಲಿ ಕೊಡವ ಅಕಾಡೆಮಿ ಬೊಳ್ಳಿನಮ್ಮೆಯ ಕೊನೆಯ ಕಾರ್ಯಕ್ರಮ ನಡೆಯಲಿದೆ.

ಬೆಳಿಗ್ಗೆ 9 ಕ್ಕೆ ಪ್ರೊ. ಇಟ್ಟೀರ ಕೆ. ಬಿದ್ದಪ್ಪ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಕೊಡವ ಭಾಷೆಯನ್ನು 8 ನೇ ಪರಿಚ್ಚೇಧಕ್ಕೆ ಸೇರಿಸುವ ಬಗ್ಗೆ ಪೇರಿಯಂಡ ಜಯಂತಿ ಅವರಿಂದ ವಿಚಾರಗೋಷ್ಠಿ, ಕೊಡವ ಭಾಷಿಗರ ನಮ್ಮೆ-ನಾಳ್ ಬಗ್ಗೆ ತೇಲಪಂಡ ಕವನ್ ಕಾರ್ಯಪ್ಪ ವಿಚಾರ ಮಂಡನೆ ಮಾಡಲಿದ್ದಾರೆ.

ಬೆಳಿಗ್ಗೆ 11 ಕ್ಕೆ ಕೊಡವ ಕವಿಗೋಷ್ಠಿ ಸಾಹಿತಿ ಚಾಮೇರ ದಿನೇಶ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಚಂಗಚಂಡ ರಶ್ಮಿ ನಿತಿನ್, ಚಮ್ಮಣಮಾಡ ವಾಣಿ ರಾಘವೇಂದ್ರ, ಚಂಗುಲಂಡ ಈಶ, ನಿವ್ಯ ದೇವಯ್ಯ, ಕೋಟೇರ ಉದಯ್, ಅಪ್ಪಚೆಟ್ಟೋಳಂಡ ವನು ವಸಂತ್, ಅಂಜಪರವಂಡ ರಂಜು, ಸುಳ್ಳಿಮಾಡ ಶಿಲ್ಪ, ಕಳ್ಳಿಚಂಡ ದೀನಾ, ರಜಿತ್ ಕಾರ್ಯಪ್ಪ, ಬಟ್ಟಕಾಳಂಡ ಮುತ್ತಣ್ಣ ಕವನ ವಾಚಿಸಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಡಾ. ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ, ನಾಟಕ ಕ್ಷೇತ್ರದಲ್ಲಿ ಕೋಳೇರ ಸನ್ನು ಕಾವೇರಪ್ಪ, ಜಾನಪದ ಕ್ಷೇತ್ರದಲ್ಲಿ ನಾಳಿಯಮ್ಮಂಡ ಕೆ. ಅಚ್ಚಮಯ್ಯ ಅವರುಗಳನ್ನು ಸನ್ಮಾನಿಸಲಾಗುತ್ತದೆ.

ಈ ಸಂದರ್ಭ ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ, ರಿಜಿಸ್ಟ್ರರ್ ಬಿ. ಚಂದ್ರಹಾಸ ರೈ, ಮಡಿಕೇರಿ ಶಾಸಕ, ಎಂಎಲ್ಸಿ ವೀಣಾ ಅಚ್ಚಯ್ಯ, ಕೊಡವ ಅಕಾಡೆಮಿ ಮಾಜಿ ಅಧ್ಯಕ್ಷರುಗಳಾದ ಡಾ. ಉಳ್ಳಿಯಡ ಎಂ. ಪೂವಯ್ಯ, ಬಾಚರಣಿಯಂಡ ಪಿ. ಅಪ್ಪಣ್ಣ, ಚಿರಿಯಪಂಡ ರಾಜಾ ನಂಜಪ್ಪ, ಉಳ್ಳಿಯಡ ಡಾಟಿ ಪೂವಯ್ಯ, ಐಮುಡಿಯಂಡ ರಾಣಿ ಮಾಚಯ್ಯ, ಅಡ್ಡಂಡ ಸಿ. ಕಾರ್ಯಪ್ಪ, ಬಿದ್ದಾಟಂಡ ಎಸ್. ತಮ್ಮಯ್ಯ ಉಪಸ್ಥಿತರಿರುವರು.

-ಸುದ್ದಿಪುತ್ರ