ಮಡಿಕೇರಿ, ಜೂ. 8: ಕಳೆದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸಂದರ್ಭ ತೊಂದರೆಗೆ ಸಿಲುಕಿರುವ ಸಂತ್ರಸ್ತ ಕುಟುಂಬಗಳಿಗೆ ಸರಕಾರದಿಂದ ಬಿಪಿಎಲ್ ಪಡಿತರ ಚೀಟಿಯನ್ನು ಕಲ್ಪಿಸುವ ಭರವಸೆ ನೀಡಿದ್ದು, ಇದುವರೆಗೂ ತನಗೆ ಸಿಕ್ಕಿಲ್ಲವೆಂದು ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ ಕೋಟೆ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅವರು ಜಿಲ್ಲಾ ಉಸ್ತುವಾರಿ ಸಚಿವರ ಬಳಿ ತಮ್ಮ ಅಳಲು ತೋಡಿಕೊಂಡರು.
ಅಲ್ಲದೆ ತಮ್ಮ ಗದ್ದೆ ಬಳಿ ಬರೆ ಕುಸಿದಿದ್ದು, ಆ ಮಣ್ಣನ್ನು ತೆರವುಗೊಳಿಸಲು ಅಧಿಕಾರಿಗಳು ಸ್ಪಂದಿಸಿಲ್ಲವೆಂದೂ, ಪರಿಹಾರ ಮೊತ್ತ ಕೂಡ ಅಲ್ಪಪ್ರಮಾಣದಲ್ಲಿ ತನಗೆ ನೀಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ಹಂತದಲ್ಲಿ ದೇವಯ್ಯ ಅವರ ಮಾತಿನಿಂದ ಕೆರಳಿದ ಸಂಸದ ಪ್ರತಾಪ್ ಸಿಂಹ ‘ದೇವಯ್ಯನವರೇ ಕೈಯಲ್ಲಿ ಮೈಕ್ ಇದೆಯೆಂದು ಏರುಧ್ವನಿಯಲ್ಲಿ ಅನವಶ್ಯಕ ಮಾತನಾಡಬೇಡಿ, ಇದು ಅಧಿಕಾರಿಗಳು - ಜನಪ್ರತಿನಿಧಿಗಳಿರುವ ಸಂತ್ರಸ್ತರ ಕುರಿತು ಕರೆದಿರುವ ಗಂಭೀರ ಸಭೆ’ ಸಭಾ ಗೌರವ ಕಾಪಾಡುವದು ಎಲ್ಲರ ಜವಾಬ್ದಾರಿ’ ಎಂದರು.
ಈ ವೇಳೆ ಸಂಸದರ ವಿರುದ್ಧವೇ ತಿರುಗಿಬಿದ್ದ ದೇವಯ್ಯ ‘ನೀವೇನು ಮಾಡಿದಿರೀ... ಗೊತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಧ್ಯ ಪ್ರವೇಶಿಸಿದ ಇನ್ನೋರ್ವ ಬಿಜೆಪಿ ಮುಖಂಡ ರವಿಕಾಳಪ್ಪ ಸಂಸದರು ವಾಸ್ತವವನ್ನೇ ಹೇಳುತ್ತಿದ್ದಾರೆ ಎಂದಾಗ ದೇವಯ್ಯ ಮುನಿಸು ಮೌನದತ್ತ ತಿರುಗಿತು.
ಚಂದ್ರಕಲಾ ಮಾತಿಗೂ ಆಕ್ಷೇಪ : ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಹಾರಂಗಿ ಅಣೆಕಟ್ಟೆಯಲ್ಲಿ ಹೂಳು ತುಂಬಿಕೊಂಡಿರುವ ಬಗ್ಗೆ ಪ್ರಸ್ತಾಪಿಸುವಷ್ಟರಲ್ಲಿ ಕೆರಳಿದ ಎಂ.ಬಿ. ದೇವಯ್ಯ ಹಾಗೂ ಎಸ್.ಬಿ. ರವಿಕುಶಾಲಪ್ಪ ಪ್ರತಿರೋಧ ವ್ಯಕ್ತಪಡಿಸಿ, ತಾವು ಹೋರಾಟ ನಡೆಸಿ ಉಸ್ತುವಾರಿ ಸಚಿವರು ಈ ಸಭೆ ಕರೆದಿದ್ದುದಾಗಿ ಸಮರ್ಥಿಸಿದರು. ಕೆರಳಿದ ಚಂದ್ರಕಲಾ ‘ನಾನು ಈ ನಾಡಿನವಳೇ’ ಎಂದು ತಮ್ಮ ಅಭಿಪ್ರಾಯ ನೀಡಿ ಕುಳಿತುಕೊಂಡರು. ಮಳೆಗಾಲದಲ್ಲಿ ಕುಶಾಲನಗರ ಜನತೆಯೂ ಸಂಕಷ್ಟ ಎದುರಿಸಿದ್ದಾಗಿ ನೆನಪಿಸಿದರು.
ವಿಷ-ಹಗ್ಗ ಕೊಡಿ : ಅನೇಕ ಸಂತ್ರಸ್ತರಿಗೆ ಯಾವದೇ ಪರಿಹಾರ ಲಭಿಸದೆ ದಿಕ್ಕು ತೋಚದಂತಾಗಿದ್ದಾರೆ. ಕೆಲವು ಅಧಿಕಾರಿಗಳ ನಡೆಯಿಂದ ಇಂಥ ಪರಿಸ್ಥಿತಿ ಎದುರಾಗಿದ್ದು, ಅಂಥವರಿಗೆ ‘ಒಂದು ಬಾಟಲಿ ವಿಷದೊಂದಿಗೆ ಒಂದು ಹಗ್ಗವನ್ನು ಕೊಟ್ಟುಬಿಡಿ’ ಎಂದು ಶಾಸಕ ಕೆ.ಜಿ. ಬೋಪಯ್ಯ ಮಾತಿನ ಚಾಟಿ ಬೀಸಿದರು. ‘ಇಂಥ ಮಾತುಗಳು ಬೇಡ’ ಎಲ್ಲರಿಗೂ ಸೂಕ್ತ ಪರಿಹಾರವನ್ನು ಒಗ್ಗೂಡಿ ಕಲ್ಪಿಸೋಣ ಎಂದು ಸಚಿವ ಸಾ.ರಾ. ಮಹೇಶ್ ತಿಳಿ ಹೇಳಿದರು.
ಪೊಲೀಸ್ ಭದ್ರತೆ : ನಿನ್ನೆ ಸಭೆ ಆರಂಭಕ್ಕೂ ಮುನ್ನ ಕೋಟೆ ಆವರಣದಲ್ಲಿ ಲಾಠಿ ಸಹಿತ ಪೊಲೀಸರ ದಂದು ಕಾಣಿಸಿಕೊಂಡಿತು. ಗ್ರಾಮೀಣ ಭಾಗದ ಸಂತ್ರಸ್ತರನೇಕರು ಈ ದೃಶ್ಯದಿಂದ ಗಾಬರಿಯೊಂದಿಗೆ ಕೋಟೆ ಹೊರ ಆವರಣದಿಂದಲೇ ಕಾಲಿಗೆ ಬುದ್ದಿ ಹೇಳಿದ ದೃಶ್ಯ ಗೋಚರಿಸಿತು. ನಿರ್ಧಿಷ್ಟವಾಗಿ ಆಯ್ದ ಮುಂದಿಗಷ್ಟೆ ಸಭೆ ನಡೆಯುವ ಸಭಾಂಗಣದತ್ತ ಪ್ರವೇಶ ನೀಡಲಾಯಿತು.
ನಿರಂತರ ಚರ್ಚೆ : ಸಭೆಯಲ್ಲಿ ಕೆಲವರು ಮಾತನಾಡಿದ್ದನ್ನೇ ಮತ್ತೆ ಮತ್ತೆ ಮಾತನಾಡಿದ ಪರಿಣಾಮ ಎರಡೂವರೆ ತಾಸುಗಳ ಸಭೆ ಅನೇಕರಿಗೆ ಅಸಹನೆ ನೀಡಿದರೆ, ಸ್ವತಃ ಸಚಿವರು ಕೂಡ ಇಂದಿನ ಸಭೆ ತಮಗೂ ಸಮಾಧಾನ ನೀಡಿಲ್ಲ; ಮುಂದಿನ ಸಭೆಯಲ್ಲಿ ಎಲ್ಲವನ್ನು ಮರುಪರಿಶೀಲಿಸಿ ಅಗತ್ಯ ಕ್ರಮ ವಹಿಸೋಣ ಎಂದು ಅಂತಿಮವಾಗಿ ನೀಡಿದರು.
ಸರದಿ ಅರ್ಜಿ : ಸಭೆಗೆ ಮುನ್ನ ಸಚಿವರ ಆಗಮನಕ್ಕಾಗಿ ನಿರೀಕ್ಷೆಯಲ್ಲಿದ್ದ ಅನೇಕರು ಕೋಟೆ ಹೊರಾಂಗಣದಲ್ಲಿ ನಗರಸಭಾ ಮಾಜೀ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಸೇರಿದಂತೆ ದಸರಾ ಸಮಿತಿ ಪ್ರಮುಖರು ಕೂಡ ತಮ್ಮ ಅಹವಾಲು ಸಲ್ಲಿಸಿದರು. ಸಭೆಯ ಬಳಿಕ ಸಭಾಂಗಣದೊಳಗೆ ಅನೇಕರು ಸಚಿವರ ಬಳಿ ಮನವಿ ಸಲ್ಲಿಸಿ, ವಿವಿಧ ಸಮಸ್ಯೆಗಳ ಇತ್ಯರ್ಥಕ್ಕೆ ಬೇಡಿಕೆ ಮಂಡಿಸಿದರು.