ಸೋಮವಾರಪೇಟೆ, ಜೂ. 8: ತಾಲೂಕಿನ ಕೂತಿ ಗ್ರಾಮದಲ್ಲಿ ಅಳವಡಿಸಿರುವ ಹಲವಷ್ಟು ವಿದ್ಯುತ್ ಕಂಬಗಳು ಭೂಮಿಗೆ ಬೀಳಲು ಬಾಗಿದ್ದರೆ, ವಿದ್ಯುತ್ ತಂತಿಗಳು ಕೈಗೆಟುಕುವಂತಿದೆ. ಈ ಬಗ್ಗೆ ಹಲವಷ್ಟು ಬಾರಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವದೇ ಸ್ಪಂದನೆಯಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೂತಿ ಗ್ರಾಮಕ್ಕೆ ಪೂರೈಕೆಯಾಗುವ 11 ಕೆವಿ ವಿದ್ಯುತ್ ತಂತಿಗಳು ಬಾಗಿದ ಕಂಬಗಳಿಂದಾಗಿ ಕೈಗೆಟುಕುವಂತಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕಂಬಗಳೂ ಸಹ ಶಿಥಿಲಾವಸ್ಥೆಗೆ ತಲುಪಿದ್ದು, ಸಮಸ್ಯೆ ಸರಿಪಡಿಸದಿದ್ದರೆ ಭಾರೀ ದುರಂತ ಸಂಭವಿಸಲಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ವಿದ್ಯುತ್ ತಂತಿಯನ್ನು ಎತ್ತರಿಸುವಂತೆ ಇಲ್ಲಿನ ನಿವಾಸಿಗಳು ಕಳೆದ 2 ಎರಡು ವರ್ಷಗಳಿಂದ ಸಂಬಂಧಿಸಿದವರಿಗೆ ಮನವಿ ನೀಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ಇದರೊಂದಿಗೆ ಹಳೆಯ ಕಂಬಗಳನ್ನು ಬದಲಿಸಿ ದುರಸ್ತಿಪಡಿಸುವಂತೆ ಬೇಡಿಕೆ ಇಟ್ಟಿದ್ದರೂ ಈಡೇರಿಲ್ಲ ಎಂದು ಗ್ರಾಮ ಸಮಿತಿ ಅಧ್ಯಕ್ಷ ಡಿ.ಎ. ಪರಮೇಶ್ ಆರೋಪಿಸಿದ್ದಾರೆ.

ತೋಳೂರುಶೆಟ್ಟಲ್ಲಿ ಹಾಗೂ ಕೂತಿ ಗ್ರಾಮಕ್ಕೆ ಪೂರೈಕೆಯಾಗುವ 11 ಕೆವಿ ವಿದ್ಯುತ್ ಸಂಪರ್ಕವು ಯಡೂರು ಮಾರ್ಗವಾಗಿ ಕಂಬಳ್ಳಿಯ ಕಾಫಿ ತೋಟ ಹಾಗೂ ಅರಣ್ಯದ ಮೂಲಕ ಹಾದುಹೋಗಿದ್ದು, ಈ ಭಾಗದಲ್ಲಿ ಮಳೆಗಾಲದಲ್ಲಿ ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದು ಹಲವು ಕಂಬಗಳು ಮುರಿದು ವಾರಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆÉ.

ಆದ್ದರಿಂದ ಈ ಮಾರ್ಗವನ್ನು ಬದಲಿಸಿ ಮುಖ್ಯ ರಸ್ತೆಯ ಮೂಲಕ ಹೊಸಬೀಡು ಮಾರ್ಗವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಶಾಸಕರು, ಸಂಸದರು ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪತ್ರಿಕೆಯ ಮೂಲಕ ಆಗ್ರಹಿಸಿದ್ದಾರೆ.