ಸೋಮವಾರಪೇಟೆ, ಜೂ. 8: ಜಿಲ್ಲೆಯ ದಿಡ್ಡಳ್ಳಿ ಅರಣ್ಯದಲ್ಲಿ ನೆಲೆ ಕಂಡುಕೊಂಡಿದ್ದ ಕುಟುಂಬಗಳನ್ನು ಸೋಮವಾರಪೇಟೆ ತಾಲೂಕಿನ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬ್ಯಾಡಗೊಟ್ಟಕ್ಕೆ ಸ್ಥಳಾಂತರಿಸಿ ಎರಡು ವರ್ಷಗಳಾಗುತ್ತಾ ಬಂದರೂ ಸಹ ಇಂದಿಗೂ ಮನೆಯ ಒಕ್ಕಲು ಮಾಡಲು ಕಾಲ ಕೂಡಿಬಂದಿಲ್ಲ.
ರಾಜ್ಯ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ದಿಡ್ಡಳ್ಳಿ ಹೋರಾಟದ ಪರಿಣಾಮ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತಕ್ಷಣ ಸ್ಪಂದನೆ ನೀಡಿ ದಿಡ್ಡಳ್ಳಿಯ ಮಂದಿಯನ್ನು ಸೋಮವಾರಪೇಟೆಯ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ಸೂರು ಕಲ್ಪಿಸಲು ಮುಂದಾಯಿತು.
ಪರಿಣಾಮ ಕಳೆದ 2017ರ ಜೂನ್‍ನಲ್ಲಿ ಎರಡೂ ಸ್ಥಳಗಳಲ್ಲಿ ಸಮರೋಪಾದಿ ಕೆಲಸ ಕಾರ್ಯಗಳು ನಡೆದು ಮನೆಗಳು ಮೇಲೇಳಲಾರಂಭಿಸಿದವು. ದಿಡ್ಡಳ್ಳಿಯಿಂದ ಸ್ಥಳಾಂತರಗೊಂಡ 528 ಕುಟುಂಬಗಳಿಗೆ ಸೂರು ಕಲ್ಪಿಸುವ ಕಾರ್ಯಕ್ಕೆ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಸಮೀಪದ ಬಸವನಹಳ್ಳಿಯಲ್ಲಿ ಜಾಗ ಗುರುತಿಸಿ ಕಾರ್ಯಯೋಜನೆ ಸಿದ್ಧಪಡಿಸಲಾಯಿತು.
ರೂ. 23 ಕೋಟಿಯ ಯೋಜನೆ: ಸರ್ಕಾರದಿಂದ ಮನೆ ನಿರ್ಮಾಣಕ್ಕೆಂದು ಬರೋಬ್ಬರಿ ರೂ. 23 ಕೋಟಿಯ ಯೋಜನೆ ಸಿದ್ಧಗೊಂಡು ಎರಡೂ ಕಡೆಗಳಲ್ಲಿ ಕಾಮಗಾರಿ ಪ್ರಾರಂಭವಾಯಿತು. ಮೊದಮೊದಲು ಒಂದು ವರ್ಷದಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವ ಭರವಸೆ ಸಿಕ್ಕಿತ್ತಾದರೂ, ನಂತರದ ದಿನಗಳಲ್ಲಿ ಕಾಮಗಾರಿ ಆಮೆನಡಿಗೆಯಲ್ಲಿ ಸಾಗಿದ ಪರಿಣಾಮ ಇಂದಿಗೂ ಯೋಜನೆಯಂತೆ ಮನೆ ನಿರ್ಮಾಣ ಕೆಲಸ ಪೂರ್ಣಗೊಂಡಿಲ್ಲ.
ಬ್ಯಾಡಗೊಟ್ಟದಲ್ಲಿ 328 ಕುಟುಂಬಗಳಿಗೆ ಆಶ್ರಯ ಕಲ್ಪಿಸಲು ಯೋಜನೆ ರೂಪಿಸಿದ್ದು, ಅದರಂತೆ 304 ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದರಲ್ಲಿ 181 ಮನೆಗಳ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡಿದ್ದು, ಈಗಾಗಲೇ ಐಟಿಡಿಪಿ ಇಲಾಖೆಯಿಂದ ಮನೆಗಳಿಗೆ ಸಂಖ್ಯೆಯನ್ನು ನಮೂದಿಸಿ ಫಲಾನುಭವಿಗಳಿಗೆ ವಿತರಿಸುವ ಕಾರ್ಯ ನಡೆದಿದೆ.
40 ಮನೆಗಳು ಇನ್ನಷ್ಟೇ ಆಗಬೇಕು: ಇಲ್ಲಿ 124 ಮನೆಗಳಿಗೆ ಸಂಬಂಧಿಸಿದಂತೆ ಇನ್ನೂ ಕೆಲಸಗಳು ಬಾಕಿ ಉಳಿದಿವೆ. ಕೆಲವು ಮನೆಗಳಿಗೆ ವಿದ್ಯುತ್, ಸುಣ್ಣಬಣ್ಣ, ಬಾಗಿಲು, ಕಿಟಕಿ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಇದರೊಂದಿಗೆ 24 ಮನೆಗಳ ನಿರ್ಮಾಣ ಕಾಮಗಾರಿ ಇನ್ನಷ್ಟೇ ಪ್ರಾರಂಭವಾಗಬೇಕಿದ್ದು, ಸುಮಾರು 10ಕ್ಕೂ ಅಧಿಕ ಕುಟುಂಬಗಳು ಸದ್ಯ ಟೆಂಡ್‍ಗಳಲ್ಲಿ ದಿನದೂಡುತ್ತಿವೆ.
ಬಸವನಹಳ್ಳಿಯಲ್ಲಿಯೂ 36 ಮನೆಗಳ ನಿರ್ಮಾಣ ಕಾಮಗಾರಿಗೆ ಇನ್ನಷ್ಟೇ ಚಾಲನೆ ನೀಡಬೇಕಿದ್ದು, ಹಲವಷ್ಟು ದಿಡ್ಡಳ್ಳಿ ಸಂತ್ರಸ್ತರು ತೋಟಗಳ ಲೈನ್‍ಮನೆಯಲ್ಲಿ ಸದ್ಯ ಜೀವನ ದೂಡುತ್ತಿದ್ದಾರೆ.
ಆಮೆ ನಡಿಗೆಯ ಕೆಲಸ: ಬ್ಯಾಡಗೊಟ್ಟದಲ್ಲಿ ಮನೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಸಂಖ್ಯೆಯೂ ಕಡಿಮೆಯಿದ್ದು, ನಿರೀಕ್ಷಿತ ವೇಗದಲ್ಲಿ ಮನೆ ನಿರ್ಮಾಣ ನಡೆಯುತ್ತಿಲ್ಲ. ದಿನಕ್ಕೆ ನಾಲ್ಕೈದು ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿರುವದು ಕಂಡುಬಂದಿದ್ದು, ಇದೇ ವೇಗದಲ್ಲಿ ಕಾಮಗಾರಿ ನಡೆದರೆ ಈ ಮಳೆಗಾಲಕ್ಕೂ ಸಹ ಸಂತ್ರಸ್ತರಿಗೆ ಸೂರು ದೊರಕುವದು ಸಂಶಯವೇ ಆಗಿದೆ.
ಯಾವಾಗ ಕೊಡ್ತಾರೋ ಗೊತ್ತಿಲ್ಲ: ‘ನಾವಿಲ್ಲಿಗೆ ಬಂದು 2 ವರ್ಷ ಆಯ್ತು, ಇನ್ನೂ ಜೋಪಡಿಯಲ್ಲೇ ಇದ್ದೇವೆ. ಯಾವಾಗ ಮನೆ ಕೊಡ್ತಾರೋ ಗೊತ್ತಿಲ್ಲ. ಕೆಲವರಂತೂ ಈಗಾಗಲೇ ಹೊಸ ಮನೆಗೆ ಸೇರಿಕೊಂಡಿದ್ದಾರೆ. ನಾವುಗಳು ಮಾತ್ರ ಇಲ್ಲೇ ಇದ್ದೀವಿ. ಮಳೆ ಬಂದರೆ ಜೋಪಡಿಯೊಳಗೆ ನೀರು ಬರುತ್ತೆ. ಇರುವ ಬಟ್ಟೆ ಬರೆಗಳನ್ನು ಇಟ್ಟುಕೊಳ್ಳಲೂ ಆಗುವದಿಲ್ಲ; ಅಕ್ಕಿ ಸಾಮಾಗ್ರಿಗಳನ್ನು ಜೋಪಾನ ಮಾಡುವದೇ ಕಷ್ಟವಾಗಿದೆ’ ಎಂದು ಇಂದಿಗೂ ಜೋಪಡಿಯಲ್ಲಿಯೇ ದಿನದೂಡುತ್ತಿರುವ ಮುತ್ತ, ಸೀತೆ, ಚಿಮ್ಮಿ, ಕೆಂಬಿ ಸೇರಿದಂತೆ ಇತರರು ತಿಳಿಸುತ್ತಾರೆ.
‘ನಮಗೆ ಇಲ್ಲಿ ಯಾವ ಕೆಲಸವೂ ಸಿಗುತ್ತಿಲ್ಲ. ಸರ್ಕಾರದಿಂದ ಸಿಗುವ ಅಕ್ಕಿ, ಸೀಮೆ ಎಣ್ಣೆ, ಇತರ ಪದಾರ್ಥಗಳನ್ನು ತೆಗೆದುಕೊಂಡು ಜೀವನ ನಡೆಸ್ತಿದ್ದೀವಿ’ ಎಂದು ಪಾರ್ವತಿ, ಬಸವ, ಶಂಕರು, ಜಾನು, ನಂಜಿ, ಪುಟ್ಟಿ ಸೇರಿದಂತೆ ಇತರರು ತಿಳಿಸುತ್ತಾರೆ.
‘ಇಲ್ಲಿನ ಕೆಲವು ಮಕ್ಕಳು ಸುತ್ತಮುತ್ತಲಿನ ಶಾಲೆ, ಅಂಗನವಾಡಿಗಳಿಗೆ ತೆರಳಿದರೆ ಹಲವಷ್ಟು ಮಕ್ಕಳು ಜೋಪಡಿಯೊಳಗೇ ಕಾಲ ಕಳೆಯುತ್ತಾರೆ. ಇವರುಗಳಿಗೆ ಸರಿಯಾದ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ಕಾರ್ಯ ಈ ವರ್ಷದಿಂದಲಾದರೂ ಆಗಬೇಕಿದೆ’ ಎಂದು ಬ್ಯಾಡಗೊಟ್ಟ ಸಮೀಪದ ಮದಲಾಪುರ ಗ್ರಾಮದ ರಮೇಶ್ ಸಲಹೆ ನೀಡುತ್ತಾರೆ.
‘ಬ್ಯಾಡಗೊಟ್ಟದಲ್ಲಿ ಇನ್ನೂ 24 ಮನೆಗಳ ಕೆಲಸ ಆಗಬೇಕಿದೆ. ಹಳೆಯ ಶೆಡ್‍ಗಳನ್ನು ಒಡೆದು ಹೊಸದಾಗಿ ಮನೆ ನಿರ್ಮಿಸಬೇಕು. ಮಳೆ-ಗಾಳಿಗೆ ಶೀಟ್ ಹಾರಿಹೋದವರು ಇದೀಗ ಪೂರ್ಣಗೊಳ್ಳದ ನೂತನ ಮನೆಗೆ ಸೇರಿದ್ದಾರೆ. ಕೆಲಸ ಇನ್ನೂ ವೇಗವಾಗಿ ನಡೆಯಬೇಕು’ ಎಂಬದು ಬ್ಯಾಡಗೊಟ್ಟದ ಪ್ರಮುಖರಾದ ಮಲ್ಲಪ್ಪ ಅವರ ಅಭಿಪ್ರಾಯ.
ಯುಜಿಡಿ ಕಾಮಗಾರಿ: ಉಳಿದಂತೆ ಬ್ಯಾಡಗೊಡ್ಡದಲ್ಲಿ ಯುಜಿಡಿ ಕಾಮಗಾರಿಯೂ ಪ್ರಗತಿಯಲ್ಲಿದೆ. ಈಗಾಗಲೇ ಶೌಚಾಲಯದ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ಕೆಲಸವೂ ಪ್ರಗತಿಯಲ್ಲಿದೆ. ಕಾಂಕ್ರೀಟ್ ರಸ್ತೆ ಕಾಮಗಾರಿ ಅಲ್ಲಲ್ಲಿ ನಡೆಯುತ್ತಿದ್ದು, ಒಳಚರಂಡಿ ವ್ಯವಸ್ಥೆಯ ಕಾಮಗಾರಿಯೂ ಚಾಲ್ತಿಯಲ್ಲಿದೆ.
ಬ್ಯಾಡಗೊಟ್ಟದಲ್ಲಿ ಈಗಾಗಲೇ 304 ಮನೆಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, 181 ಮಂದಿಗೆ ಮನೆಯ ಸಂಖ್ಯೆ ನೀಡಲಾಗಿದೆ. ಉಳಿದವರು ಖಾಲಿಯಿದ್ದ ಮನೆಗಳಿಗೆ ಸೇರಿಕೊಂಡಿದ್ದಾರೆ. ಮನೆ ಸಿಗದವರು, ಟೆಂಟ್‍ಗಳ ಶೀಟ್ ಹಾರಿ ಹೋದವರು ಸುತ್ತಮುತ್ತಲ ಲೈನ್‍ಮನೆಗಳಲ್ಲಿ ಸೇರಿಕೊಂಡಿದ್ದರೆ, 10ಕ್ಕೂ ಅಧಿಕ ಕುಟುಂಬ ಇಂದಿಗೂ ಟೆಂಟ್‍ಗಳಲ್ಲಿಯೇ ನರಕಸದೃಶ ಬದುಕು ಸಾಗಿಸುತ್ತಿವೆ.
ರೂ. 6 ಕೋಟಿ ಬಾಕಿ: ನಿರ್ಮಿತಿ ಕೇಂದ್ರದಿಂದ ಮನೆ ನಿರ್ಮಾಣ ಕಾರ್ಯ ಆಗುತ್ತಿದ್ದರೆ, ಲ್ಯಾಂಡ್ ಆರ್ಮಿಯಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ನಡೆಯುತ್ತಿದೆ. ಮನೆ ನಿರ್ಮಾಣಕ್ಕೆಂದು ಸರ್ಕಾರದಿಂದ 23 ಕೋಟಿಯ ಯೋಜನಾ ವೆಚ್ಚ ನಿಗದಿಗೊಳಿಸಲಾಗಿದ್ದು, ಇನ್ನೂ ರೂ. 6 ಕೋಟಿ ಹಣ ಬಿಡುಗಡೆಗೆ ಬಾಕಿ ಇದೆ. ಈಗಾಗಲೇ ರೂ. 3 ಕೋಟಿಯಷ್ಟು ಕಾಮಗಾರಿ ಮುಕ್ತಾಯಗೊಂಡಿದ್ದು, ಹೊಸದಾಗಿ ರೂ. 3 ಕೋಟಿಯ ಕಾಮಗಾರಿ ಯನ್ನು ಕೈಗೆತ್ತಿಕೊಳ್ಳಬೇಕಿದೆ. ಒಟ್ಟಾರೆ ಸರ್ಕಾರದಿಂದ ರೂ. 6 ಕೋಟಿ ಅನುದಾನ ಬಿಡುಗಡೆಗೆ ಬಾಕಿ ಇರುವ ಬಗ್ಗೆ ತಿಳಿದುಬಂದಿದೆ.
2017ರ ಏಪ್ರಿಲ್-ಮೇ ತಿಂಗಳಲ್ಲಿ ದಿಡ್ಡಳ್ಳಿ ಹೋರಾಟ ನಡೆದು ಜೂನ್‍ನಲ್ಲಿ 600ಕ್ಕೂ ಅಧಿಕ ಕುಟುಂಬಗಳನ್ನು ಅಲ್ಲಿಂದ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿಗೆ ಸ್ಥಳಾಂತರಿಸಲಾಯಿತು. ನಂತರ ವಿವಿಧ ಇಲಾಖಾಧಿಕಾರಿಗಳು ಫಲಾನುಭವಿಗಳ ಆಯ್ಕೆ ನಡೆಸಲು ಅನೇಕ ಸುತ್ತಿನ ಕ್ರಮಗಳನ್ನು ಅನುಸರಿಸುತ್ತಿದ್ದಂತೆ 100ಕ್ಕೂ ಅಧಿಕ ಕುಟುಂಬಗಳು ಕೇಂದ್ರದಿಂದ ಕಾಲ್ಕಿತ್ತಿದ್ದವು. ಅಂತಿಮವಾಗಿ 528 ಫಲಾನುಭವಿಗಳನ್ನು ಗುರುತಿಸಿ ಮನೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಇದೀಗ ಎರಡೂ ಕೇಂದ್ರದಲ್ಲಿ ಮನೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದರೂ ಫಲಾನುಭವಿಗಳಿಗೆ ಹಂಚಿಕೆಯಾಗಲು ಕಾಲ ಕೂಡಿ ಬಂದಿಲ್ಲ. ಬ್ಯಾಟಗೊಟ್ಟದಲ್ಲಿ 24 ಮತ್ತು ಬಸವನಹಳ್ಳಿಯಲ್ಲಿ 36 ಮನೆಗಳ ನಿರ್ಮಾಣಕ್ಕೆ ಇನ್ನಷ್ಟೇ ಅಡಿಗಲ್ಲು ಹಾಕಬೇಕಿದೆ. ಸಣ್ಣಪುಟ್ಟ ಕೆಲಸಗಳು ಬಾಕಿ ಇರುವ ಮನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಫಲಾನುಭವಿಗಳಿಗೆ ತಕ್ಷಣ ವಿತರಿಸಲು ಕ್ರಮ ಕೈಗೊಳ್ಳಬೇಕಿದೆ.