ಮಡಿಕೇರಿ, ಜೂ. 5: ವೀರಾಜಪೇಟೆ ತಾಲೂಕಿನ ತೋಟಗಾರಿಕೆ ಇಲಾಖೆಯಲ್ಲಿ 2019-20ನೇ ಸಾಲಿಗೆ ವಿವಿಧ ಯೋಜನೆಗಳಡಿಯಲ್ಲಿ ರೈತ ಫಲಾನುಭವಿಗಳಿಗೆ ಸಹಾಯಧನದ ಮೂಲಕ ಕಾರ್ಯಕ್ರಮ ಅನುಷ್ಠಾನಗೊಳಿಸುವದಕ್ಕೆ ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿವಿಧ ಯೋಜನೆಗಳಡಿ ಭಾಗವಹಿಸಲು ಇಚ್ಚಿಸಿದಲ್ಲಿ ತಮ್ಮ ಜಮೀನಿನ ಪಹಣಿ ಪತ್ರ ಹಾಗೂ ಆಧಾರ್ ಕಾರ್ಡಿನ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ ತೋಟಗಾರಿಕೆ ಇಲಾಖೆಗೆ ಸಲ್ಲಿಸಬಹುದು. 2019-20ನೇ ಸಾಲಿನಲ್ಲಿ ಸರ್ಕಾರವು ನೀಡುವ ಅನುದಾನದ ಲಭ್ಯತೆಯ ಮೇರೆಗೆ ತಾಲೂಕಿನಲ್ಲಿ ಬಂದ ಅರ್ಜಿಗಳಲ್ಲಿ ಮೊದಲು ನೀಡಿದವರಿಗೆ ಮೊದಲ ಆದ್ಯತೆಯ ಮೇರೆಗೆ ಬಾಳೆ ಬೆಳೆಯನ್ನು ಹೊಸದಾಗಿ ತೋಟ ಮಾಡಲು, ಕಾಳುಮೆಣಸು ಹಾಗೂ ಕೊಡಗಿನ ಕಿತ್ತಳೆ ಹಳೆ ತೋಟಗಳ ಪುನಶ್ಚೇತನ ಕಾರ್ಯಕ್ರಮ, ಜೇನು ಸಾಕಾಣಿಕೆಯಡಿ ಜೇನು ಪೆಟ್ಟಿಗೆ ಹಾಗೂ ಕಾಲೋನಿಗಳ ಸ್ಥಾಪನೆ, ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಕೆ, ಸಂರಕ್ಷಿತ ಬೇಸಾಯದಡಿ ಪಾಲಹೌಸ್ ಘಟಕ ನಿರ್ಮಾಣ, ಸಮಗ್ರ ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆಗೆ ಸಹಾಯಧನ, ಪ್ಯಾಕ್ ಹೌಸ್ ನಿರ್ಮಾಣ, ಸಣ್ಣ ಮಟ್ಟದ ಅಣಬೆ ಉತ್ಪಾದನೆ ಘಟಕ ನಿರ್ಮಾಣ ಯೋಜನೆ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಹಣ್ಣಿನ ತೋಟಗಳ ಪ್ರದೇಶ ವಿಸ್ತರಣೆ ಕಾರ್ಯಕ್ರಮಕ್ಕೆ ಸಹಾಯಧನ ನೀಡಲಾಗುವದು. ಹೆಚ್ಚಿನ ಮಾಹಿತಿಗೆ ಪೊನ್ನಂಪೇಟೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ಜಿ.ಪಂ.)ಯನ್ನು ಸಂಪರ್ಕಿಸಬಹುದು.