ಗೋಣಿಕೊಪ್ಪ ವರದಿ, ಜೂ. 5 : ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದ ಮಾನಸಿಕ ಅಸ್ವಸ್ತ ಮಹಿಳೆಯನ್ನು ಗೋಣಿಕೊಪ್ಪ ಪೊಲೀಸರ ಮಧ್ಯಸ್ತಿಕೆ ಮೂಲಕ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಲಾಯಿತು.
ಕಳೆದ 4 ದಿನಗಳಿಂದ ಗೋಣಿಕೊಪ್ಪ ಪಟ್ಟಣದಲ್ಲಿ ವರ್ತಕರು ಹಾಗೂ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಮಹಿಳೆಯಿಂದ ಪೊಲೀಸರು ಕೂಡ ಇರುಸು-ಮುರುಸು ಅನುಭವಿಸುತ್ತಿದ್ದರು. ಇದರಂತೆ ಭಾನುವಾರ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ಅವರ ಮುಂದಾಳತ್ವದಲ್ಲಿ ಮಹಿಳಾ ಪೊಲೀಸರು ಕ್ರಮಕೈಗೊಂಡರು. ಪೊಲೀಸರಿಗೆ ಬೈಗುಳದ ಮೂಲಕ ಮಹಿಳೆ ಕಾಟ ನೀಡಿದರು.
4 ದಿನಗಳಿಂದ ಗೋಣಿಕೊಪ್ಪ ಪಟ್ಟಣದಲ್ಲಿ ಸೇರಿಕೊಂಡಿದ್ದ ಮಹಿಳೆಯಿಂದ ವರ್ತಕರು ಹೆಚ್ಚು ತೊಂದರೆ ಅನುಭವಿಸಿದ್ದರು. ಅಂಗಡಿಗಳಿಗೆ ತೆರಳಿ ಸಾವಿರಾರು ಮೌಲ್ಯದ ವಸ್ತುಗಳನ್ನು ಖರೀದಿಸುವದಾಗಿ ನಂಬಿಸಿ ವಸ್ತುಗಳನ್ನು ಅಲ್ಲಿಯೇ ಬಿಟ್ಟು ಬೇರೆ ಅಂಗಡಿಗೆ ತೆರಳಿ ಇದನ್ನೇ ಮುಂದುವರಿಸಿದ್ದರು. ಈ ಸಂದರ್ಭ ಸ್ಥಳೀಯ ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ನನ್ನ ಊರು ಮಂಡ್ಯ ಎಂದು ಮಹಿಳೆ ನೀಡಿದ ಮನವಿಯಂತೆ ಮಂಡ್ಯಕ್ಕೆ ಬಿಡಲಾಗಿತ್ತು. ಆದರೂ ಮತ್ತೆ ಹಿಂತಿರುಗಿ ಬರುವ ಮೂಲಕ ಮತ್ತೆ ಕಿರಿಕಿರಿ ನೀಡುತ್ತಿದ್ದರು. ಜಿಲ್ಲಾಸ್ಪತ್ರೆ ವೈದ್ಯರ ಸಲಹೆಯಂತೆ ಪೊಲೀಸರು ಕ್ರಮಕೈಗೊಂಡರು.
ಗ್ರಾಮ ಪಂಚಾಯ್ತಿ ನಿರ್ಲಕ್ಷ್ಯ : 4 ದಿನದಿಂದ ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದರೂ, ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಆಡಳಿತ ವರ್ಗ ಮಾನವೀಯ ದೃಷ್ಠಿಯಿಂದ ಕ್ರಮಕ್ಕೆ ಮುಂದಾಗದೆ ಇರುವ ಬಗ್ಗೆ ಸಾರ್ವಜನಿಕರು ಪಂಚಾಯ್ತಿ ವಿರುದ್ದ ನಿರ್ಲಕ್ಷ್ಯ ಆರೋಪ ವ್ಯಕ್ತವಾಗಿದೆ. ಅಸ್ವಸ್ತಗೊಂಡವರನ್ನು ಸರ್ಕಾರದ ಇಲಾಖೆಗಳ ಮೂಲಕ ಚಿಕಿತ್ಸೆ ನೀಡಲು ಪಂಚಾಯ್ತಿಗೆ ಜವಬ್ದಾರಿ ಇದೆ. ಆದರೂ ಪಂಚಾಯ್ತಿ ಪ್ರಮುಖರಿಗೆ ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲ. ಅಸ್ವಸ್ತವಾಗಿರುವದು ಮಹಿಳೆ ಎಂದು ಅರಿಯದೇ ಕ್ರಮಕ್ಕೆ ಮುಂದಾಗದಿರುವದು ಬೇಜವಬ್ದಾರಿ ಎಂಬ ಆರೋಪ ವ್ಯಕ್ತವಾಯಿತು. ಪೊಲೀಸರ ಮಾನವೀಯ ಸ್ಪಂದನೆಗೆ ಸಾರ್ವಜನಿಕರು ಬೇಷ್ ಎಂದಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಮೈಸೂರಿನ ಮಹಿಳೆ ಎಂಬ ಮಾಹಿತಿ ಇದೆ.
-ಸುದ್ದಿಪುತ್ರ