ಸೋಮವಾರಪೇಟೆ, ಜೂ. 4: ವಾಸವಿದ್ದ ಬಾಡಿಗೆ ಮನೆಯಲ್ಲಿ ವಿವಾಹಿತ ಮಹಿಳೆಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತದೇಹದ ಮೇಲೆ ಗಂಭೀರ ಗಾಯಗಳು ಕಂಡುಬಂದಿ ರುವ ಹಿನ್ನೆಲೆ ಸಂಬಂಧಿಕರು ಪತಿಯ ವಿರುದ್ಧ ದೂರು ನೀಡಿದ್ದಾರೆ.

ಪಟ್ಟಣ ಸಮೀಪದ ಕಾನ್ವೆಂಟ್ ಬಾಣೆಯಲ್ಲಿ ಬಾಡಿಗೆ ಮನೆಯೊಂದ ರಲ್ಲಿ ವಾಸವಿದ್ದ ಪವಿತ್ರ (35) ಎಂಬಾಕೆಯೇ ಮೃತ ದುರ್ದೈವಿ ಯಾಗಿದ್ದು, ಈಕೆಯ ಪತಿ ವಾಸು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಾಸು ಹಾಗೂ ಪವಿತ್ರ ದಂಪತಿ ಕೂಲಿ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದು ಗಂಡ, ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ತಮ್ಮ ಮನೆಯಲ್ಲಿಯೇ ಪವಿತ್ರಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಣೆಯ ಬಲಭಾಗದಲ್ಲಿ ಗಂಭೀರ ಗಾಯವಾಗಿ ರಕ್ತ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಕೊಲೆ ಶಂಕೆ ವ್ಯಕ್ತವಾಗಿತ್ತು.

ಮೃತಳ ಸಹೋದರ ಚನ್ನಪ್ಪ ಅವರು ಘಟನೆಯ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೋಲಿಸರಿಗೆ ದೂರು ನೀಡಿದ್ದರು. ಮೃತದೇಹವನ್ನು ಮಡಿಕೇರಿಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದು, ಇದೊಂದು ಆತ್ಮಹತ್ಯೆ ಎಂದು ವೈದ್ಯರು ವರದಿ ನೀಡಿರುವದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಪವಿತ್ರಾಳ ಆತ್ಮಹತ್ಯೆಗೆ ಪತಿ ವಾಸು ನೀಡುತ್ತಿದ್ದ ಕಿರುಕುಳವೇ ಕಾರಣ ಎಂಬ ದೂರಿನ ಆಧಾರದಲ್ಲಿ ಆರೋಪಿ ವಾಸುವನ್ನು ವಶಕ್ಕೆ ಪಡೆದಿರುವ ಸೋಮವಾರಪೇಟೆ ಪೋಲಿಸ್ ಸಬ್ ಇನ್ಸ್‍ಪೆಕ್ಟರ್ ಶಿವಶಂಕರ್ 306 ಹಾಗೂ 498 (ಎ) ವಿಧಿ ಅನ್ವಯ ಮೊಕದ್ದಮೆ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇಕರ್, ಡಿವೈಎಸ್‍ಪಿ ದಿನಕರ ಶೆಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.