ಸುಂಟಿಕೊಪ್ಪ, ಜೂ. 4: ಇತರ ಇಲಾಖೆಯಲ್ಲಿ ಚುಕ್ಕಿ ಬಾರದಂತೆ ಕರ್ತವ್ಯ ನಿರ್ವಹಿಸಬಹುದು ಆದರೆ ಪೊಲೀಸ್ ಇಲಾಖೆಯಲ್ಲಿ ಅದು ಕಷ್ಟ ಸಾಧ್ಯವೆಂದು ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ಡಿವೈಎಸ್ಪಿ ದಿನಕರ್‍ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಸಂತ ಮೇರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಿವೃತ್ತ ಎ.ಎಸ್.ಐ ಪಾರ್ಥ ಹಾಗೂ ಸುಂಟಿಕೊಪ್ಪ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪೊಲೀಸ್ ಸಿಬ್ಬಂದಿ ನಿತ್ಯವೂ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿದೆ; ಪೊಲೀಸ್ ಕುಟುಂಬದವರಿಗೆ ಹಬ್ಬ ಹರಿದಿನಗಳಂದು ರಸ್ತೆ ಬದಿಯಲ್ಲಿ ಇನ್ನಿತರ ಕರ್ತವ್ಯಗಳಿಗೆ ನಿಯೋಜಿಸಲಾಗುತ್ತದೆ. ಆ ದಿನಗಳಲ್ಲಿ ಕುಟುಂಬ ಸದಸ್ಯರೊಂದಿಗೆ ಒಗ್ಗೂಡಿ ಆಚರಿಸಲು ಸಾದ್ಯವೇ ಇಲ್ಲವೆಂದು ವಿರ್ಮಶಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಶಾಲನಗರ ವೃತ್ತ ನಿರೀಕ್ಷ ದಿನೇಶ್‍ಕುಮಾರ್ ಅವರು ಮಾತನಾಡಿ, ಪಾರ್ಥ ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನಿವೃತ್ತ ಎ.ಎಸ್‍ಐ ಪಾರ್ಥ ತನ್ನ ವೃತ್ತಿ ಜೀವನ, ಸಾಗಿದ ಘಟನೆ, ಅಧಿಕಾರಿಗಳ ಸಲಹೆ ಮಾರ್ಗದರ್ಶನ, ಸಹಸಿಬ್ಬಂದಿಗಳ ಸಹಕಾರದಿಂದ ಯಶಸ್ಸು ಸಿಕ್ಕಿದೆ ಎಂದರು.

ಪಾರ್ಥ ಅವರ ಪತ್ನಿ ಸಿ.ಎ.ಗೀತಾ ಅವರನ್ನು ಗೌರವಿಸಲಾಯಿತು. ಸುಂಟಿಕೊಪ್ಪ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ವಿವಿಧ ಠಾಣೆಗಳಿಗೆ ವರ್ಗಾವಣೆಗೊಂಡಿರುವ ಈರಪ್ಪ, ದಿನೇಶ್, ಧನುಕುಮಾರ್, ಪುಂಡರೀಕಾಕ್ಷ, ಗಣೇಶ್ ಪಾರ್ಥ ಅವರಿಗೆ ಫಲತಾಂಬೂಲ ವಿತರಿಸಿದರು. ಠಾಣಾಧಿಕಾರಿ ಜಯರಾಂ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಬಾಂದವ್ಯ ಪ್ರಾರ್ಥಿಸಿ, ಗಾಯತ್ರಿ ನಿರೂಪಿಸಿ, ಶಿವಪ್ಪ ವಂದಿಸಿದರು.