ಸಿದ್ದಾಪುರ, ಜೂ. 4: ಸದಾ ಕಸ ತ್ಯಾಜ್ಯಗಳಿಂದ ತುಂಬಿರುವ ಸಿದ್ದಾಪುರ ದಲ್ಲಿ ಕಸ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಹಾಕದಂತೆ ವಿಶೇಷಚೇತನ ಜನರಲ್ಲಿ ಅರಿವು ಮೂಡಿಸುತ್ತಿದ್ದಾನೆ.

ಕರಡಿಗೋಡುವಿನ ನಿವಾಸಿ ವಿಶೇಷಚೇತನ ಮಂಜುನಾಥ್ ಎಂಬ ಯುವಕ ತನ್ನ ಸೈಕಲ್‍ಗೆ ಬ್ಯಾಟರಿ ಅಳವಡಿಸಿ, ಮೈಕ್ ಮೂಲಕ ಕಸವನ್ನು ರಸ್ತೆಯಲ್ಲಿ ಹಾಕಬಾರದು ಎಂಬಿತ್ಯಾದಿ ಹಾಡುಗಳನ್ನು ಹಾಕಿಕೊಂಡು ಪಟ್ಟಣದಲ್ಲಿ ಜಾಗೃತಿ ಮೂಡಿಸುತ್ತಿದ್ದಾನೆ. ಬೆಳಗ್ಗಿನಿಂದ ತನ್ನ ಮೈಕ್ ತೆಗೆದುಕೊಂಡು ಸೈಕಲ್ ಮೂಲಕ ಪಟ್ಟಣಕ್ಕೆ ಬರುವ ಮಂಜುನಾಥ್, ಮುಖ್ಯ ರಸ್ತೆಗಳಲ್ಲಿ ಜನರಿಗೆ ಜಾಗೃತಿಯ ಸಂದೇಶ ಮೂಡಿಸುತ್ತಿದ್ದಾನೆ. ಯುವಕ ಮಂಜು ಕಳೆದ ಹಲವು ವರ್ಷಗಳಿಂದ ತನ್ನ ಸೈಕಲ್‍ಗೆ ಸ್ಪೀಕರ್ ಕಟ್ಟಿಕೊಂಡು ಹಾಡುಗಳನ್ನು ಹಾಕುತ್ತಾ ಸಾಗುತ್ತಿದ್ದಾನೆ. ಈತ ಕನ್ನಡ ಬಾಷೆಯ ಅಭಿಮಾನಿಯಾಗಿದ್ದು, ಸೈಕಲ್‍ನ ಹಿಂಭಾಗದಲ್ಲಿ ಕರ್ನಾಟಕದ ಬಾವುಟ ಅಳವಡಿಸಿ, ಕನ್ನಡ ಚಲನಚಿತ್ರ ಗೀತೆಗಳನ್ನೂ ಕೂಡ ಸೈಕಲ್‍ನಲ್ಲಿ ಹಾಕಿಕೊಂಡು ಸಾಗುತ್ತಾನೆ. ಮಂಜುವಿನ ಪರಿಸರ ಕಾಳಜಿ ಹಾಗೂ ಕನ್ನಡ ಅಭಿಮಾನಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ. - ವಾಸು