ಗೋಣಿಕೊಪ್ಪ ವರದಿ, ಜೂ. 4: ಜಿಲ್ಲೆಯಲ್ಲಿ ರೈತರು ಅನುಭವಿಸುತ್ತಿರುವ ತೊಂದರೆಗಳನ್ನು ಆಡಳಿತ ವರ್ಗಕ್ಕೆ ಹೋರಾಟದ ಮೂಲಕ ತಲಪಿಸಿ ಕೃಷಿಕರ ಸಮಸ್ಯೆ ಪರಿಹಾರಕ್ಕೆ ಕೊಡಗು ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಯೋಜನೆ ರೂಪಿಸಲಾಗುವದು ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ತಿಳಿಸಿದ್ದಾರೆ.

ಕಾಡಾನೆಗಳಿಂದ ಆಗುತ್ತಿರುವ ತೊಂದರೆ, ಬೆಳೆ ಪರಿಹಾರದಲ್ಲಿನ ತಾರತಮ್ಯ ನೀತಿ, ಮರಳುಗಾರಿಕೆ ವಿಚಾರದಲ್ಲಿ ಕೃಷಿಕರು ಅನುಭವಿಸುತ್ತಿ ರುವ ಸಮಸ್ಯೆಗಳನ್ನು ಅಧಿಕಾರಿಗಳ ಗಮನ ಸೆಳೆಯಲು ಯೋಜನೆ ರೂಪಿಸಲು ನಿರ್ಧರಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಡಾನೆ ಸಮಸ್ಯೆ ಪರಿಹಾರಕ್ಕೆ ಅರಣ್ಯ ಅಧಿಕಾರಿಗಳು ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಳ್ಳಬೇಕು. ಮೇಲಾಧಿಕಾರಿಗಳು ಮೂಲ ಸಮಸ್ಯೆ ಅರಿಯದೆ ಅರಣ್ಯ ಸಿಬ್ಬಂದಿಗೆ ಕಾಡಾನೆ ಅಟ್ಟಲು ಸೂಚನೆ ನೀಡುವ ಮೂಲಕ ಸಮಸ್ಯೆ ಉಲ್ಭಣಿಸಲು ಕಾರಣವಾಗುತ್ತಿದ್ದಾರೆ. ಕಾಡು ಸೇರಿದ ಆನೆಗಳು ಮತ್ತೆ ಗ್ರಾಮಕ್ಕೆ ಬಾರದಂತೆ ನಿಯಂತ್ರಿಸಲು ಶಾಶ್ವತ ಪರಿಹಾರ ಅನುಷ್ಠಾನಗೊಳ್ಳುತ್ತಿಲ್ಲ. ಇದರಿಂದಾಗಿ ಕಾರ್ಯಾಚರಣೆ ತಂಡದ ಹಿಂದೆಯೆ ಮತ್ತೆ ತೋಟಕ್ಕೆ ಕಾಡಾನೆಗಳು ಲಗ್ಗೆ ಇಡುವಂತಾಗಿದೆ ಎಂದರು.

ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು, ಸಂಖ್ಯೆ ನಿಯಂತ್ರಣಕ್ಕೆ ಸಂತಾನಹರಣ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಮೇ 13 ರಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಮಹಾಸಭೆ ನಡೆದಿದೆ. ಆದರೂ ಮತ್ತೆ ಮಹಾಸಭೆ ನಡೆಯಲಿದೆ ಎಂದು ಕೆಲವರು ಪ್ರಕಟಣೆ ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ. ಆ ಸಭೆಗೂ ನಮ್ಮ ಸಂಘಟನೆಗೂ ಸಂಬಂಧವಿಲ್ಲ ಎಂದರು.

ಕಾರ್ಯಧ್ಯಕ್ಷ ಬಾಚೀರ ಕಾರ್ಯಪ್ಪ ಮಾತನಾಡಿ, ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ತಾ. 10 ರಂದು ಶ್ರೀಮಂಗಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿ, ಸಾರ್ವಜನಿಕರ ಸಭೆ ನಡೆಯಲಿದೆ. ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಕೃಷಿಕರಿಗೆ ಮನೆ ನಿರ್ಮಾಣಕ್ಕೆ ಬೇಕಾದ ಮರಳು ತೆಗೆಯಲು ಒತ್ತಾಯಿಸುವದು, ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದವರಿಗೆ ಪರಿಹಾರ ವಿತರಣೆಯಲ್ಲಿನ ತಾರತಮ್ಯ, ಹೋಬಳಿ ಮಟ್ಟದಲ್ಲಿ ಬೆಳೆಹಾನಿ ಬಗ್ಗೆ ಅರ್ಜಿ ಸ್ವೀಕರಿಸಲು ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಲಾಗುವದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಅಜ್ಜಮಾಡ ಸ್ಮಿತಾ ಅಯ್ಯಪ್ಪ, ಖಜಾಂಜಿ ಅಜ್ಜಿಕುಟ್ಟೀರ ಸುಬ್ರಮಣಿ, ಸಲಹೆಗಾರ ಪೋಡಮಾಡ ಉತ್ತಪ್ಪ ಇದ್ದರು.