ಸೋಮವಾರಪೇಟೆ, ಜೂ. 4: ತಾಲೂಕಿನಲ್ಲಿ ಹಲವಾರು ವರ್ಷಗಳಿಂದ ಬಗರ್ ಹುಕುಂ ಜಾಗದಲ್ಲಿ ಸಾಗುವಳಿ ಮಾಡಿಕೊಂಡು ಬಂದಿರುವ ಬಡ ಮತ್ತು ಸಣ್ಣ ರೈತರಿಗೆ ಭೂಮಿಯ ಹಕ್ಕುಪತ್ರ ನೀಡಬೇಕೆಂದು ಕರ್ನಾಟಕ ಭೂ ಹಕ್ಕುದಾರರ ವೇದಿಕೆ ಆಗ್ರಹಿಸಿದೆ.
ಪತ್ರಿಕಾಭವನದಲ್ಲಿ ಆಯೋಜಿಸ ಲಾಗಿದ್ದ ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಕೆ.ಪುಟ್ಟಸ್ವಾಮಿ ಮಾತನಾಡಿ, ಬಗರ್ ಹುಕುಂ ಸಾಗುವಳಿದಾರರು ಅರ್ಜಿಗಳನ್ನು ಸಲ್ಲಿಸಿ ದಶಕಗಳೇ ಕಳೆದರೂ ಇದುವರೆಗೂ ತಾನು ಉಳುತ್ತಿರುವ ಭೂಮಿಯ ಒಡೆತನದ ಪಟ್ಟೆ ಸಿಕ್ಕಿಲ್ಲ. ಇದರಿಂದಾಗಿ ಬೆಳೆ ವಿಮೆ, ಸರಕಾರಿ ಸೌಲಭ್ಯ, ಬ್ಯಾಂಕ್ ಹಣಕಾಸು ಸೌಲಭ್ಯ, ಭೂಮಿ ಭದ್ರತೆ, ಭೂ ಪಟ್ಟೆದಾರ ಮಾನ್ಯತೆ, ಭೂ ಅಭಿವೃದ್ಧಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದರು.
ಸೋಮವಾರಪೇಟೆ ತಾಲೂಕಿನಲ್ಲಿ 8466 ಅರ್ಜಿಗಳು ಸಕ್ರಮಗೊಳ್ಳಲು ಬಾಕಿ ಇದೆ. ಇದುವರೆಗೂ ಕೇವಲ 150 ಅರ್ಜಿಗಳಿಗೆ ಮಂಜೂರಾತಿ ನೀಡಿ ಸಾಗುವಳಿ ಹಕ್ಕು ಪತ್ರ ನೀಡಲಾಗಿದೆ. ಚುನಾವಣೆಗಳು ಮುಗಿದರೂ ಏನೂ ಪ್ರಕ್ರಿಯೆ ನಡೆಯುತ್ತಿಲ್ಲ. ಇದರಿಂದ ಸಾಗುವಳಿ ದಾರರಿಗೆ ತುಂಬಾ ಅನಾನುಕೂಲ ಉಂಟಾಗಿದೆ ಎಂದು ಅಳಲು ತೋಡಿಕೊಂಡರು.
ವೇದಿಕೆಯ ಪ್ರಮುಖರಾದ ಸುನಂದ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಸಕ್ರಮೀಕರಣ ಸಮಿತಿ ರಚಿಸಲು ತುರ್ತು ಕ್ರಮಕೈಗೊಳ್ಳಬೇಕು. ಅರ್ಜಿ ನಮೂನೆ 57ರ ನೋಂದಣಿ ಪ್ರಕ್ರಿಯೆಯನ್ನು ಪುನರ್ ಪ್ರಾರಂಭಿಸ ಬೇಕು. ತಾಲೂಕಿನಲ್ಲಿ ಜೀವನೋ ಪಾಯಕ್ಕಾಗಿ ಸರಕಾರಿ ಜಮೀನು ಗಳಾದ ಊರುಗುಪ್ಪೆ, ಊರುಡುವೆ ಜಮೀನುಗಳಲ್ಲಿ ವಾಸವಿರುವ ಒತ್ತುವರಿದಾರರಿಗೆ ಒಂದು ಬಾರಿ ಮಂಜೂರಾತಿ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬುಡಕಟ್ಟು ಆದಿವಾಸಿಗಳಿಗೆ ಭೂ ಹಕ್ಕು ಪತ್ರ, ಕುಡಿಯುವ ನೀರು, ಮನೆ, ರಸ್ತೆ, ವಿದ್ಯುತ್ ದೀಪ, ಶೌಚಾಲಯ ಇವುಗಳಿಂದ ವಂಚಿತರಾಗಿ ಶೋಚನೀಯ ಬದುಕು ಸಾಗಿಸುತ್ತಿದ್ದಾರೆ. ಇವರಿಗೆ ಸೂಕ್ತ ರಕ್ಷಣೆ ಮತ್ತು ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು. ಇನ್ನೂ ವಿಳಂಬ ಧೋರಣೆ ಅನುಸರಿಸಿದಲ್ಲಿ ವೇದಿಕೆಯ ವತಿಯಿಂದ ಹಕ್ಕೊತ್ತಾಯ ಧರಣಿ ನಡೆಸಲಾಗುವದು ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ವೇದಿಯ ತಾಲೂಕು ಅಧ್ಯಕ್ಷ ರಾಜಪ್ಪ, ಹೊಸತೋಟ ಸಣ್ಣಪ್ಪ, ಮಾಲಂಬಿ ಹಾಡಿಯ ಬಸಪ್ಪ, ಅಭಿಷೇಕ್ ಮತ್ತಿತರರು ಉಪಸ್ಥಿತರಿದ್ದರು.