ವೀರಾಜಪೇಟೆ, ಜೂ. 3: ಜಿಲ್ಲಾ ಮಟ್ಟದ ಆಸ್ಪತ್ರೆಗೆ ಸಮನಾಗಿ ಒಟ್ಟು 240 ಹಾಸಿಗೆಗಳನ್ನು ಹೊಂದಿರುವ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಗೆ ಹೊಸದಾಗಿ ಮಂಜೂರಾಗಿರುವ ರೂ 45ಲಕ್ಷ ವೆಚ್ಚದ ಹೈಟೆಕ್ ಶಸ್ತ್ರ ಚಿಕಿತ್ಸಾ ಘಟಕದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಈ ತಿಂಗಳ ಅಂತ್ಯದೊಳಗೆ ಇದರ ಸೇವೆ ಸಾರ್ವಜನಿಕರಿಗೆ ಲಭಿಸಲಿದೆ.

ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಶಸ್ತ್ರ ಚಿಕಿತ್ಸೆ ನಡೆಸುವ ರಾಜ್ಯದ ಹತ್ತು ಸಾರ್ವಜನಿಕ ಆಸ್ಪತ್ರೆಗಳಿಗೆ ಈ ಹೈಟೆಕ್ ಶಸ್ತ್ರ ಚಿಕಿತ್ಸೆ ಘಟಕ ಮಂಜೂರಾಗಿದ್ದು ಈ ಪೈಕಿ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯೂ ಸೇರಿದೆ. ಈ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 1200ರಿಂದ 1500ರವರೆಗೆ ಎಲ್ಲ ರೀತಿಯ ಶಸ್ತ್ರ ಚಿಕಿತ್ಸೆಗಳು ನಡೆಯುತ್ತಿರುವದರಿಂದ ಹೈಟೆಕ್ ಶಸ್ತ್ರ ಚಿಕಿತ್ಸಾ ಘಟಕ ಲಭಿಸಲು ಸಾಧ್ಯವಾಗಿದೆ.

ಕಳೆದ 2004ರಲ್ಲಿ ನಬಾರ್ಡ್‍ನ ವಿಶ್ವ ಬ್ಯಾಂಕ್ ನೆರವಿನ ಯೋಜನೆ ಯಲ್ಲಿ ಸುಮಾರು 6ಕೋಟಿ ವೆಚ್ಚದಲ್ಲಿ ಸಾರ್ವಜನಿಕ ಆಸ್ಪತ್ರೆಯನ್ನು ಹೊಸ ಕಟ್ಟಡ ಸೇರಿದಂತೆ ಎಲ್ಲಾ ರೀತಿಯಿಂದಲೂ ಆಧುನೀಕರಣ ಗೊಳಿಸಲಾಗಿತ್ತು. ಈಗ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳಿನಿಂದ ಡಯಾಲಿಸಿಸ್‍ನ 2ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು ಮೇ ಮೂರನೇ ವಾರದಲ್ಲಿ ಪುನ: ಡಯಾಲಿಸಿಸ್‍ನ ಎರಡು ಯಂತ್ರಗಳು ಬಂದಿದ್ದು ಈಗ ಒಟ್ಟು 4 ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ. ಈಗಾಗಲೇ ಡಿಜಿಟಲ್ ಎಕ್ಸರೇ ಕಾರ್ಯ ನಿರ್ವಹಿಸುತ್ತಿದ್ದು ಇದರ ಜೊತೆಯಲ್ಲಿ ಮೂರು ಹಾಸಿಗೆಯ ತುರ್ತು ನಿಗಾ ಘಟಕವೂ ಸಧ್ಯದಲ್ಲಿಯೇ ಕಾರ್ಯ ಆರಂಭಿಸಲಿದೆ.

ಹೈಟೆಕ್ ಶಸ್ತ್ರ ಚಿಕಿತ್ಸಾ ಘಟಕದ ವಿಶೇಷತೆ

ಹೈಟೆಕ್ ಶಸ್ತ್ರ ಚಿಕಿತ್ಸಾ ಘಟಕ ಹವಾ ನಿಯಂತ್ರಣ ಹೊಂದಿದ್ದರೂ ಇದರ ಗಾಳಿ ಶಸ್ತ್ರ ಚಿಕಿತ್ಸೆಗೊಳಪಟ್ಟ ರೋಗಿಗೆ ತಗಲದ ರೀತಿಯಲ್ಲಿ ಹವಾ ನಿಯಂತ್ರಣವನ್ನು ವ್ಯವಸ್ಥೆಗೊಳಿ ಸಲಾಗಿದೆ. ಶಸ್ತ್ರ ಚಿಕಿತ್ಸೆಯ ಆಧುನಿಕ ಉಪಕರಣಗಳನ್ನು ಅಗತ್ಯವಾದ ಎಲ್ಲ ಆಧುನಿಕ ಸೌಲಭ್ಯಗಳನ್ನು ಹೊಂದಿದೆ.

ವೀರಾಜಪೇಟೆ ತಾಲೂಕು ಕೇಂದ್ರದಲ್ಲಿರುವ ಈ ಆಧುನಿಕ ಆಸ್ಪತ್ರೆಗೆ ಪ್ರತಿ ದಿನ 450ರಿಂದ 600ಮಂದಿ ರೋಗಿಗಳು ತಪಸಾಣೆ ಹಾಗೂ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಎಲ್ಲಾ ರೀತಿಯಲ್ಲಿಯೂ ಆಧುನಿಕತೆಯನ್ನು ಹೊಂದಿರುವ ಈ ಆಸ್ಪತ್ರೆಗೆ ಅಗತ್ಯವಿರುವಷ್ಟು ನೀರನ್ನು ಪ.ಪಂ. ಪೊರೈಸುತ್ತಿದೆ. ಸುಮಾರು 65 ಕಿಲೋ ವ್ಯಾಟ್ಸ್ ಸಾಮಥ್ರ್ಯದ ಜನರೇಟರ್ ಖರೀದಿ ಸಲು ಪ್ರಕ್ರಿಯೆ ಮುಂದುವ ರೆದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಎಲ್ಲಾ ಔಷಧಿಗಳು ಸಿದ್ಧ ದಾಸ್ತಾನಿ ದ್ದರೂ ವಿವಿಧ ಭಾಗಗಳಿಗೆ 14ಮಂದಿ ವೈದ್ಯರುಗಳ ಸೇವೆಯ ಅಗತ್ಯವಿದ್ದು ಈಗ ಕೇವಲ 6ಮಂದಿ ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ವಿಶ್ವನಾಥ್ ಸಿಂಪಿ ತಿಳಿಸಿದರು.