ನಾಪೆÇೀಕ್ಲು, ಜೂ. 4: ಬೇಸಿಗೆಯ ದಿನಗಳಲ್ಲಿ ಪ್ರವಾಸಿಗರಿಗೆ ತಡಿಯಂಡಮೋಳ್ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶವನ್ನು ಕಳೆದ ಮಾ. 12 ರಿಂದ ನಿಷೇಧಿಸಿ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದರು.

ಇದೀಗ ಉತ್ತಮ ಮಳೆ ಸುರಿದ ನಂತರ ಎಂದಿನಂತೆ ಜೂ. 1ರಿಂದ ಬೆಟ್ಟ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ. ಬೇಸಿಗೆ ರಜಾ ಅವಧಿಯಲ್ಲಿ ಕಕ್ಕಬ್ಬೆಯ ತಡಿಯಂಡಮೋಳ್ ಬೆಟ್ಟವನ್ನೇರಲು ಬರುತ್ತಿರುವ ಪ್ರವಾಸಿಗರ ಮತ್ತು ಚಾರಣಿಗರ ಸಂಖ್ಯೆ ಅಧಿಕವಾಗಿದೆ.

ಕೊಡಗಿನಲ್ಲಿರುವ ಸಣ್ಣ ಸಣ್ಣ ಬೆಟ್ಟಗಳು ಪ್ರವಾಸಿಗರನ್ನು ಮತ್ತು ಚಾರಣಿಗರನ್ನು ಆಕರ್ಷಿಸಿದರೂ, ಕಕ್ಕಬ್ಬೆಯ ತಡಿಯಂಡಮೋಳ್ ಬೆಟ್ಟ ತನ್ನದೇ ಆದ ಪ್ರತ್ಯೇಕ ಸ್ಥಾನವನ್ನು ಹೊಂದಿದೆ. ಇದು ಕೊಡಗಿನಲ್ಲಿಯೇ ದೊಡ್ಡ ಬೆಟ್ಟ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಇದು ಸಮುದ್ರ ಮಟ್ಟದಿಂದ 6500 ಅಡಿಗಳಷ್ಟು ಎತ್ತರದಲ್ಲಿದೆ. ಈ ಬೆಟ್ಟಕ್ಕೆ ಬರುವ ಪ್ರವಾಸಿಗರ ಮತ್ತು ಚಾರಣಿಗರ ಸಂಖ್ಯೆ ಹೆಚ್ಚಾಗಲು, ನಾಲ್ಕುನಾಡಿನ ಪರಿಸರದಲ್ಲಿರುವ ಹೋಂ ಸ್ಟೇಗಳು ಮತ್ತು ರೆಸಾರ್ಟ್‍ಗಳು ಮುಖ್ಯ ಪಾತ್ರ ವಹಿಸುತ್ತಿವೆ.

ಪ್ರವಾಸಿಗರು ಕೊಡಗಿನ ಪ್ರಮುಖ ಪ್ರವಾಸಿ ಕೇಂದ್ರಗಳನ್ನು ವೀಕ್ಷಿಸಿದ ಅನಂತರ ತಡಿಯಂಡಮೋಳ್ ಬೆಟ್ಟ ಏರಲು ಆಸಕ್ತಿ ತೋರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿಗೆ ಬೆಂಗಳೂರು, ಚೆನೈ, ಹೈದರಾಬಾದ್, ಕೇರಳ ಮೊದಲಾದ ಕಡೆಗಳಿಂದ ರಜಾದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ಆಗಮಿಸುತ್ತಿರುವದು ಕಂಡುಬರುತ್ತಿದೆ. ಮಕ್ಕಳ ರಜಾ ದಿನಗಳಲ್ಲಿ ನಡೆಸಲಾಗುವ ಬೇಸಿಗೆ ಶಿಬಿರದ ಶಿಬಿರಾರ್ಥಿಗಳು, ಎನ್.ಎಸ್.ಎಸ್. ಶಿಬಿರಾರ್ಥಿಗಳು, ಎನ್.ಸಿ.ಸಿ ವಿದ್ಯಾರ್ಥಿಗಳು ಟ್ರಕ್ಕಿಂಗ್ ಹೆಸರಿನಲ್ಲಿ ತಡಿಯಂಡಮೋಳ್ ಬೆಟ್ಟ ಹತ್ತುವದು ಸಾಮಾನ್ಯವಾಗಿದೆ. ಈ ಬೆಟ್ಟ ಕಕ್ಕಬ್ಬೆಯಿಂದ 8-10 ಕಿ.ಮೀ. ಅಂತರದಲ್ಲಿದೆ. ಇಲ್ಲಿಗೆ 5-6 ಕಿ.ಮೀ. ನವರೆಗೆ ಜೀಪಿನಲ್ಲಿಯೂ ಸಾಗಬಹುದು. ಕಕ್ಕಬ್ಬೆಯಿಂದ ಬೆಟ್ಟಕ್ಕೆ ಹೋಗುವ ದಾರಿಯಲ್ಲಿರುವ ದೊಡ್ಡವೀರರಾಜೇಂದ್ರ 1792ರಲ್ಲಿ ನಿರ್ಮಿಸಿದ ನಾಲ್ಕುನಾಡು ಅರಮನೆಯನ್ನು ಸಂದರ್ಶಿಸಿ ಮುಂದೆ ಸಾಗಿದರೆ ಹೇಳಲಾರದಂತಹ ಹೊಸತನದ ಅನುಭವ.

ಮುಗಿಲೆತ್ತರದ ಮರಗಳು, ಕಡಿದಾದ ರಸ್ತೆ, ಆಳ ಪ್ರಪಾತ, ಬೆಟ್ಟಗಳ ನಡುವಿನ ಕಣಿವೆಗಳಲ್ಲಿ ಹಸಿರು ಬಯಲು, ನಾಲ್ಕು ಕಡೆಗಳಿಂದ ಪ್ರತಿಧ್ವನಿಸುವ ಕೂಗಿನ ಶಬ್ಧ. ಅದರ ಸುಖ ಅನುಭವಿಸಿದವರಿಗೆ ಮಾತ್ರ ಗೊತ್ತು. ಮುಕ್ಕಾಲು ಭಾಗ ತಲಪಿ ಹಿಂತಿರುಗಿ ನೋಡಿದರೆ ನಮ್ಮ ಎಲ್ಲಾ ಧಣಿವು ಮಾಯವಾಗುವಂತಹ ಸುಂದರ ನೋಟ ನಮ್ಮ ಮನಸ್ಸನ್ನು ಪುಳಕಿತಗೊಳಿಸುತ್ತದೆ. ಈ ಬೆಟ್ಟದ ಸುತ್ತ ಹುಟ್ಟಿ ಕೆಳಗೆ ಧುಮಕುವ ನದಿ ಜರಿಗಳು ಪ್ರವಾಸಿಗರ ಕಣ್ಮನ ಸೆಳೆಯುತ್ತವೆ. ಬೆಟ್ಟದ ಅಡಿಯಿಂದ ಮುಗಿಲಿಗೆ ಮುತ್ತಿಕ್ಕುತ್ತಿರುವಂತೆ ತೋರುವ ಸುತ್ತಲಿನ ಹಸಿರು ರಾಶಿ ಪ್ರವಾಸಿಗರನ್ನು ರೋಮಾಂಚನ ಗೊಳಿಸಲಿದೆ.