ಸೋಮವಾರಪೇಟೆ, ಜೂ. 4: ತಾಲೂಕು ವ್ಯಾಪ್ತಿಯಲ್ಲಿ ಪೂರ್ಣ ಗೊಳ್ಳದೇ ಇರುವ ಕುಡಿಯುವ ನೀರಿನ ಕಾಮಗಾರಿಗಳನ್ನು ತಕ್ಷಣ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಕುಡಿಯುವ ನೀರನ್ನು ಕಲ್ಪಿಸಬೇಕೆಂದು ಜಿ.ಪಂ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಲಾಯಿತು.

ತಾಲೂಕು ಪಂಚಾಯಿತಿ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಅಧ್ಯಕ್ಷತೆಯಲ್ಲಿ, ತಾ.ಪಂ. ಸಭಾಂಗಣದಲ್ಲಿ ನಡೆಯಿತು.

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಥಮ ಆದ್ಯತೆ ನೀಡಬೇಕು. ಪೈಪ್‍ಲೈನ್, ಬೋರ್‍ವೆಲ್, ವಿದ್ಯುತ್ ಸಂಪರ್ಕ, ಮೋಟಾರ್ ಅಳವಡಿಕೆ ಸಂಬಂಧ ಇತರ ಇಲಾಖೆಗಳತ್ತ ಕೈ ತೋರಿಸದೇ ನಿಮ್ಮ ಇಲಾಖೆಯೇ ಹೆಚ್ಚಿನ ಕಾಳಜಿ ವಹಿಸಬೇಕೆಂದು ಅಭಿಮನ್ಯುಕುಮಾರ್ ಅವರು ಸಂಬಂಧಿಸಿದ ಅಭಿಯಂತರರಿಗೆ ಸೂಚಿಸಿದರು.

ತಾಲೂಕಿನಾದ್ಯಂತ 2017-18ನೇ ಸಾಲಿನಲ್ಲಿ ಟಾಸ್ಕ್‍ಫೋರ್ಸ್ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದ ಬಗ್ಗೆ ಮಾಹಿತಿ ಪಡೆದ ಉಪಾಧ್ಯಕ್ಷರು, ಮುಂದಿನ ಸೋಮವಾರ ವಿದ್ಯುತ್ ಇಲಾಖಾ ಅಭಿಯಂತರರನ್ನು ಒಳಗೊಂಡಂತೆ ಕುಡಿಯುವ ನೀರಿಗೆ ಸಂಬಂಧಿಸಿ ದಂತೆಯೇ ವಿಶೇಷ ಸಭೆ ಕರೆಯುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ಅವರಿಗೆ ನಿರ್ದೇಶನ ನೀಡಿದರು.

ಜಿ.ಪಂ.ಯಿಂದ ಹಲವಷ್ಟು ಕಾಮಗಾರಿಗಳು ಬಾಕಿ ಉಳಿದಿರುವ ಬಗ್ಗೆ ಅಭಿಯಂತರ ವೀರೇಂದ್ರ ಅವರಿಂದ ಮಾಹಿತಿ ಪಡೆದ ಅಭಿಮನ್ಯುಕುಮಾರ್, ಮುಂದಿನ ದಿನಗಳಲ್ಲಿ ತಾ.ಪಂ. ನಿಂದಲೇ ಎಲ್ಲಾ ಕಾಮಗಾರಿ ಗಳನ್ನು ಪರಿಶೀಲಿಸ ಲಾಗುವದು ಎಂದರು. ಹಲವಷ್ಟು ಶಾಲೆಗಳಲ್ಲಿ ಮಿತಿಮೀರಿ ಕಟ್ಟಡಗಳನ್ನು ನಿರ್ಮಿಸುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಶಾಲೆಗಳಲ್ಲಿ ನೂತನ ಕಟ್ಟಡದ ಅವಶ್ಯಕತೆಯಿದ್ದರೆ ಮಾತ್ರ ಕಟ್ಟಡಗಳನ್ನು ನಿರ್ಮಿಸಿ ಎಂದು ತಾಕೀತು ಮಾಡಿದರು.

ಇದರೊಂದಿಗೆ ನೂತನವಾಗಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ತೆರೆಯುತ್ತಿದ್ದು, ಇಂತಹ ಶಾಲೆಗಳಿಗೆ ಅಗತ್ಯವಿರುವ ಕೊಠಡಿ, ಶೌಚಾಲಯಗಳನ್ನು ನಿರ್ಮಿಸುವತ್ತ ಗಮನಹರಿಸುವಂತೆ ಸೂಚಿಸಿದರು. ಕಿರಗಂದೂರು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗೆ ಶೌಚಾಲಯದ ಬೇಡಿಕೆಯಿದ್ದು, ತುರ್ತು ಗಮನಹರಿಸುವಂತೆ ಅಭಿಯಂತರ ವೀರೇಂದ್ರ ಅವರಿಗೆ ಸದಸ್ಯ ಸತೀಶ್ ತಿಳಿಸಿದರು.

ಪಶುಸಂಗೋಪನಾ ಇಲಾಖೆಯ ಸುಪರ್ದಿಯಲ್ಲಿರುವ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳುತ್ತಿ ರುವ ಬಗ್ಗೆ ಅಧಿಕಾರಿ ಬದಾಮಿ ಅವರು ಸಭೆಯ ಗಮನ ಸೆಳೆದರು. ಖಾಲಿ ಉಳಿದಿರುವ ಜಾಗದಲ್ಲಿ ಕೋಳಿ ಸಾಕಾಣಿಕೆಗೆ ಘಟಕ ನಿಮಿಸಲು ಯೋಜನೆ ರೂಪಿಸುವಂತೆ ಉಪಾಧ್ಯಕ್ಷರು ಸೂಚಿಸಿದರು.

ಸಭೆಯ ವೇದಿಕೆಯಲ್ಲಿ ತಾ.ಪಂ. ಸದಸ್ಯರುಗಳಾದ ಧರ್ಮಪ್ಪ, ಲೀಲಾವತಿ ಅವರುಗಳು ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.