ಅಮ್ಮತ್ತಿ, ಜೂ.2: ಕೊಡಗು ಜಿಲ್ಲಾ ಫುಟ್ಬಾಲ್ ಸಂಸ್ಥೆ ಆಶ್ರಯದೊಂದಿಗೆ ಅಮ್ಮತ್ತಿ ಪ್ರೌಢ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಫುಟ್ಬಾಲ್ ಲೀಗ್ ಹಣಾಹಣಿ, ಅಂತಿಮ ಹಂತ ತಲುಪಿದೆ. ಹಾಲಿ ಚಾಂಪಿಯನ್ ಸಿವೈಸಿ ಒಂಟಿಯಂಗಡಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದರೆ ಪಾಲಿಬೆಟ್ಟದ ಕ್ಯಾಪ್ಟನ್ಸ್ ಇಲವೆನ್ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ ಚೊಚ್ಚಲ ಪ್ರಶಸ್ತಿಯ ಕನಸಲ್ಲಿದೆ.

ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯಾವಳಿಯಲ್ಲಿ ಪಾಲಿಬೆಟ್ಟದ ಕ್ಯಾಪ್ಟನ್ಸ್ ಇಲವೆನ್ ತಂಡ, ಗೋಣಿಕೊಪ್ಪಲಿನ ರೊಜಾರಿಯೋ ತಂಡವನ್ನು 5-1 ಗೋಲುಗಳಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ಎಂಟ್ರಿ ಪಡೆಯಿತು. ಅದ್ಭುತ ಕಾಲ್ಚಳಕ ಪ್ರದರ್ಶಿಸಿದ ಕ್ಯಾಪ್ಟನ್ಸ್ ಇಲವೆನ್ ತಂಡದ ಪ್ರವೀಣ್ ಹ್ಯಾಟ್ರಿಕ್ ಗೋಲುಗಳಿಸಿ ತಂಡವನ್ನು ಫೈನಲ್‍ಗೆ ಕೊಂಡೊಯ್ಯುವಲ್ಲಿ ಪ್ರಧಾನ ಪಾತ್ರವಹಿಸಿದರು. ಇದೇ ತಂಡದ ಅಜಿತ್ ಮತ್ತು ಚಿಕ್ಕೇಗೌಡ ತಲಾ ಒಂದೊಂದು ಗೋಲು ದಾಖಲಿಸಿ ಗೆಲುವಿನ ಅಂತರ ಹೆಚ್ಚಿಸಿದರು.. ಎದುರಾಳಿ ತಂಡದ ಜೀತನ್ ಏಕೈಕ ಗೋಲುಗಳಿಸಿದರು.

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಚಾಂಪಿಯನ್ ಪಟ್ಟಕ್ಕೆ ತಕ್ಕಂತೆ ಸಂಘಟಿತ ಪ್ರದರ್ಶನ ನೀಡಿದ ಸಿವೈಸಿ ಒಂಟಿಯಂಗಡಿ ತಂಡ, ಐಎನ್‍ಎಸ್ ಗುಡ್ಡೆಹೊಸೂರು ತಂಡವನ್ನು 3-1 ಗೋಲುಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿತು. ಸಿವೈಸಿ ತಂಡದ ಧೀರಜ್, ಶರತ್ ಮತ್ತು ಹರೀಶ್ ತಲಾ ಒಂದೊಂದು ಗೋಲು ಗಳಿಸಿ ಗೆಲುವಿನ ರೂವಾರಿಗಳಾದರು. ಐಎನ್‍ಎಸ್ ಪರ ಪಾಂಡ್ಯನ್ ಏಕೈಕ ಗೋಲು ದಾಖಲಿಸಿದರು. ಇಂದು ಬೆಳಗ್ಗೆ 10.45ಕ್ಕೆ ಫೈನಲ್ ಪಂದ್ಯಾವಳಿ ನಡೆಯಲಿದೆ.