ಬೆಂಗಳೂರು, ಜೂ. 2: ಗ್ರಾಮ ವಾಸ್ತವ್ಯ ಮೂಲಕ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಿಂದೊಮ್ಮೆ ಸುದ್ದಿಯಾಗಿದ್ದರು. ಈ ಬಾರಿ ರಾಜ್ಯದಲ್ಲಿ ಮೈತ್ರಿ ಮೂಲಕ ಲೋಕಸಭಾ ಚುನಾವಣೆ ಎದುರಿಸಿದ್ದ ಕಾಂಗ್ರೆಸ್-ಜೆಡಿಎಸ್‍ಗೆ ಹೀನಾಯ ಸೋಲುಂಟಾಗಿದ್ದು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಜನರಿಗೆ ಹತ್ತಿರವಾಗಲು ಇದೀಗ ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸಲಿದ್ದಾರೆ. ಸಿಎಂ ಕುಮಾರಸ್ವಾಮಿ ಮುಂದಿನ ತಿಂಗಳು ಗ್ರಾಮ ವಾಸ್ತವ್ಯಕ್ಕೆ ಚಾಲನೆ
(ಮೊದಲ ಪುಟದಿಂದ) ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ಮಡಿಕೇರಿಯಲ್ಲಿ ಕಳೆದ ವರ್ಷ ಪ್ರವಾಹ ಮಳೆಯಿಂದ ಸಾಕಷ್ಟು ಹಾನಿ ಉಂಟಾಗಿತ್ತು. ನಿರಾಶ್ರಿತರಿಗೆ ಸರ್ಕಾರ ಸಹಾಯ ಒದಗಿಸಿತ್ತು. ಆದರೂ ಕೂಡ ಈ ಭಾಗದಲ್ಲಿ ಸಾಕಷ್ಟು ಕುಂದು ಕೊರತೆಗಳಿವೆ. ಇದನ್ನು ಹತ್ತಿರದಿಂದ ಆಲಿಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಹಾಗಾಗಿ ಮಡಿಕೇರಿಯಲ್ಲಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಲು ಚಿಂತನೆ ನಡೆಸಿದ್ದಾರೆ. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯಕ್ಕೆ ಇಲಾಖೆ ಸಿಬ್ಬಂದಿ ಗ್ರಾಮ ವಾಸ್ತವ್ಯದ ರೂಪರೇಷಗಳನ್ನು ಸಿದ್ಧಪಡಿಸುತ್ತಿದ್ದಾರೆ. ಗ್ರಾಮ ವಾಸ್ತವ್ಯದ ಮೂಲಕ ಜನರಿಗೆ ಹತ್ತಿರವಾಗಲು ಕುಮಾರಸ್ವಾಮಿ ಯೋಜನೆ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ಸಿಎಂ ಕಚೇರಿ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಲಿದೆ.