ಸೋಮವಾರಪೇಟೆ, ಜೂ. 2: ಶಾಂತಳ್ಳಿಯ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ತಾ.8ರಂದು ಜರುಗಲಿರುವ 7ನೇ ಸೋಮವಾರ ಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ನಿವಾಸದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಲೋಕೇಶ್ ಸಾಗರ್, ಕೋಶಾಧ್ಯಕ್ಷ ಎಸ್.ಎ. ಮುರಳೀಧರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ಡಿ. ವಿಜೇತ್, ಕೋಶಾಧ್ಯಕ್ಷ ಎ.ಪಿ. ವೀರರಾಜು, ನಿಕಟ ಪೂರ್ವ ಅಧ್ಯಕ್ಷ ಎಚ್.ಜೆ. ಜವರಪ್ಪ, ಜಿಲ್ಲಾ ನಿರ್ದೇಶಕ ಫಿಲಿಪ್ ವಾಸ್, ತಾಲೂಕು ಪದಾಧಿಕಾರಿಗಳಾದ ಸುದರ್ಶನ್, ಹಂಡ್ರಂಗಿ ನಾಗರಾಜು ಮತ್ತಿತರರು ಇದ್ದರು.
ಸರ್ವಾಧ್ಯಕ್ಷರಿಗೆ ಆಹ್ವಾನ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹೆಬ್ಬಾಲೆ ಗ್ರಾಮದ ಡಾ. ಕೆ.ನಾಗೇಶ್ ಅವರನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆತ್ಮೀಯವಾಗಿ ಆಹ್ವಾನಿಸಲಾಯಿತು.
ಸಮ್ಮೇಳನಾಧ್ಯಕ್ಷರ ಪರಿಚಯ: ಹೆಬ್ಬಾಲೆ ಗ್ರಾಮದ ಬಿ.ಎಸ್.ಕೆಂಚಯ್ಯ ಮತ್ತು ಮುತ್ತಮ್ಮ ದಂಪತಿಗಳ ಪುತ್ರರಾಗಿ ಜನಿಸಿದ ನಾಗೇಶ್, ಪ್ರಸ್ತುತ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಸೃಜನಾತ್ಮಕ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ.
"ಅರಳವ್ವ" ಮತ್ತು "ಬಾಡಿಗೆ ದೇವರು" ಎಂಬ ಕಾದಂಬರಿಗಳು ಹೈದರಬಾದ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳ ಪಠ್ಯಪುಸ್ತಕವಾಗಿದೆ. ಬಾಡಿಗೆ ದೇವರು ಕಾದಂಬರಿ ರಾಣಿ ಚೆನ್ನಮ್ಮ ವಿವಿ ಪದವಿ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವಾಗಿರುವದು ಡಾ. ನಾಗೇಶ್ ಅವರ ಬರವಣಿಗೆಯ ಕೌಶಲ್ಯ ಹಾಗೂ ಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿದೆ.
"ಗರ್ಭಗುಡಿಗೆ ಏಕೆ ಬಾಗಿಲು" ಮತ್ತು "ಅಗ್ರಹಾರ" ಕಾದಂಬರಿಗಳು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಗ್ಲಿಮ್ಸಸ್ ಆಫ್ ಕರ್ನಾಟಕ ಫೋಕ್ ಲೋರ್ ಪುಸ್ತಕ ಇಂಗ್ಲಿಷ್‍ನಲ್ಲಿ ಪ್ರಕಟಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಗ್ರಾಮೀಣ ಪ್ರದೇಶದ ಶಾಲೆಗಳಾದ ಹೆಬ್ಬಾಲೆ, ಕುಶಾಲನಗರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯಾಸಂಗ ಮಾಡಿದ ಡಾ. ನಾಗೇಶ್, ಬಿಎ ಪದವಿಯನ್ನು ಮಡಿಕೇರಿಯ ಎಫ್‍ಎಂಸಿ ಕಾಲೇಜಿನಲ್ಲಿ, ಮಂಗಳೂರು ವಿವಿಯಲ್ಲಿ ಎಂಎ ಅರ್ಥಶಾಸ್ತ್ರ, ಮೈಸೂರು ಶಾರದಾ ವಿಲಾಸ ಕಾಲೇಜಿನಲ್ಲಿ ಎಲ್‍ಎಲ್‍ಬಿ, ಮೈಸೂರು ವಿವಿಯಲ್ಲಿ ಎಂಎ ಕನ್ನಡ, ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವಿ, 1993ರಲ್ಲಿ ಯುಜಿಸಿ, 1999ರಲ್ಲಿ ಪಿಜಿ ಡಿಪ್ಲೋಮಾ, ಭಾರತೀಯ ಸಾಹಿತ್ಯ, ಭಾಷಾ ವಿಜ್ಞಾನ, ಡಾ. ಆರ್ವೀಯಸ್ ಸುಂದರಂ ಮಾರ್ಗದರ್ಶನದಲ್ಲಿ ಕೊಡವರ ಪ್ರದರ್ಶನ ಕಲೆಗಳ ಕುರಿತು ಪಿಎಚ್‍ಡಿ ಪದವಿಯೊಂದಿಗೆ ಉನ್ನತ ಶಿಕ್ಷಣವನ್ನು ಪಡೆದಿದ್ದು, 1997ರಿಂದ ಹಂಪಿ ಕನ್ನಡ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.