ಕುಶಾಲನಗರ, ಜೂ. 1: ಮಾನವನ ಸ್ವಾರ್ಥ ಮನಸ್ಥಿತಿಯ ಕಾರಣ ನದಿ ಮತ್ತು ಪರಿಸರ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿರುವದು ಆತಂಕದ ವಿಷಯವಾಗಿದೆ ಎಂದು ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಸ್ವಚ್ಛ ಕಾವೇರಿಗಾಗಿ ಆಗ್ರಹಿಸಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಕುಶಾಲನಗರ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿ ಆಶೀರ್ವಚನ ನೀಡಿದ ಅವರು, ಜನಸಂಖ್ಯೆ ಅಧಿಕವಾದಂತೆ, ಅಭಿವೃದ್ಧಿಯ ನಾಗಾಲೋಟದ ಕಾರಣ ಎಲ್ಲೆಡೆ ಅಶುಚಿತ್ವ, ಅನೈರ್ಮಲ್ಯ ತಾಂಡವಾಡುತ್ತಿದೆ. ಜೀವಸಂಕುಲಗಳಲ್ಲಿ ಪ್ರಾಣಿ, ಪಕ್ಷಿಗಳನ್ನು ಹೊರತುಪಡಿಸಿದರೆ ಬುದ್ಧಿವಂತ ಜೀವಿ ಎನಿಸಿದ ಮಾನವನ ಅನಾಗರಿಕ ವರ್ತನೆ ನದಿ ಕಲುಷಿತಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದರು. ಪ್ರಸ್ತುತ ಕಾಲಘಟ್ಟದಲ್ಲಿ ಶುದ್ಧ ನೀರಿನ ಕೊರತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮುಂದಿನ ಪೀಳಿಗೆಗೆ ನದಿ, ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲಿ ಪರಿಸರ ಜಾಗೃತಿ ಮೂಡಿಸುವದು ಅನಿವಾರ್ಯವಾಗಿದೆ ಎಂದರು.

ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಸದಾಶಿವ ಸ್ವಾಮೀಜಿ ಮಾತನಾಡಿ, ಆರೋಗ್ಯವಂತ ಜೀವನಕ್ಕೆ ಶುದ್ಧ ಗಾಳಿ, ಪರಿಶುದ್ಧ ನೀರಿನ ಅಗತ್ಯವಿದೆ. ನೈಸರ್ಗಿಕವಾಗಿ ಉಚಿತವಾಗಿ ದೊರೆಯುತ್ತಿರುವ ಈ ಎರಡೂ ಅಮೂಲ್ಯ ವಸ್ತುಗಳ ಮರುಸೃಷ್ಟಿ ಅಸಾಧ್ಯವಾದ ಕಾರಣ ಇವುಗಳನ್ನು ಕಾಪಾಡಿಕೊಳ್ಳುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಸತ್ಯಾಗ್ರಹ ನಿರತರಿಗೆ ಕುಶಾಲನಗರ ಹಿರಿಯ ನಾಗರಿಕರಾದ ವಿ.ಎನ್. ಪ್ರಭಾಕರ ಶೆಟ್ಟಿ, ಮಹಿಳಾ ಭಜನಾ ಮಂಡಳಿ ಪ್ರಮುಖರಾದ ರಮಾ ವಿಜಯೇಂದ್ರ, ಗೌಡ ಸಮಾಜ ಅಧ್ಯಕ್ಷರಾದ ಕೇಚಪ್ಪನ ಮೋಹನ್ ಕುಮಾರ್ ಗಿಡ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ಪ್ರಮುಖರಾದ ಕೆ.ಜಿ. ಮನು, ಡಿ.ಆರ್. ಸೋಮಶೇಖರ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಕೆ.ಆರ್. ಶಿವಾನಂದನ್ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಸಮಿತಿ ಪ್ರಮುಖರ ಬೇಡಿಕೆಗಳನ್ನು ಆಲಿಸಿದ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸುಜಯ್‍ಕುಮಾರ್, ಕಾವೇರಿ ನದಿಗೆ ಚರಂಡಿ ಮೂಲಕ ಶೌಚ ತ್ಯಾಜ್ಯ ಹರಿಸುತ್ತಿರುವ ಹೊಟೇಲ್, ಲಾಡ್ಜ್‍ಗಳ ವಿರುದ್ಧ ನೋಟೀಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳುವದರೊಂದಿಗೆ ನದಿಗೆ ನೇರವಾಗಿ ತ್ಯಾಜ್ಯ ಸೇರುತ್ತಿರುವ ಸ್ಥಳಗಳಲ್ಲಿ ತಕ್ಷಣ ಇಂಗುಗುಂಡಿ ನಿರ್ಮಿಸಿ ನದಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವದು ಎಂಬ ಲಿಖಿತ ಭರವಸೆ ಮೇರೆಗೆ ಮಧ್ಯಾಹ್ನ ಸತ್ಯಾಗ್ರಹವನ್ನು ಹಿಂತೆಗೆದು ಕೊಳ್ಳಲಾಯಿತು. ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಉಪವಾಸ ಸತ್ಯಾಗ್ರಹಿಗಳಿಗೆ ಎಳನೀರು ನೀಡುವ ಮೂಲಕ ಉಪವಾಸ ಅಂತ್ಯಗೊಳಿಸ ಲಾಯಿತು. ಇದೇ ಸಂದರ್ಭ ಪಟ್ಟಣ ಪಂಚಾಯ್ತಿ ಆವರಣದಲ್ಲಿ ಗಿಡ ನೆಡಲಾಯಿತು.

ಪ.ಪಂ. ಸದಸ್ಯರಾದ ಅಮೃತ್‍ರಾಜ್, ಎಂ.ಬಿ. ಸುರೇಶ್, ಮಾಜಿ ಅಧ್ಯಕ್ಷ ಹೆಚ್.ಜೆ. ಕರಿಯಪ್ಪ, ಅಬ್ದುಲ್ ಖಾದರ್, ಕನ್ನಡಪರ ಸಂಘಟನೆಗಳ ಜಿಲ್ಲಾಧ್ಯಕ್ಷರುಗಳಾದ ಎಂ. ಕೃಷ್ಣ, ವೆಂಕಟೇಶ್ ಪೂಜಾರಿ, ಹೆಚ್.ಎನ್. ಮುರಳೀಧರ್, ಮಡಿಕೇರಿ ಗ್ರೀನ್ ಸಿಟಿ ಫೋರಂನ ಅಧ್ಯಕ್ಷರಾದ ಜಯ ಚಿಣ್ಣಪ್ಪ, ಚೈಯಂಡ ಸತ್ಯ, ವಿವಿಧ ಸಂಘಟನೆಗಳ ಪ್ರಮುಖರಾದ ವಿ.ಎನ್. ವಸಂತಕುಮಾರ್, ಕಮಲ ಗಣಪತಿ, ವಿಜಯೇಂದ್ರ, ವಿ.ಎನ್. ಉಮಾಶಂಕರ್, ಎಂ.ಡಿ. ಕೃಷ್ಣಪ್ಪ, ಮಂಜುನಾಥ್, ಕೆ.ಎನ್. ದೇವರಾಜು, ಶಿವರಾಜ್, ಅಕ್ಷಯ್, ಕೊಡವ ಸಮಾಜ ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು ಸತ್ಯಾಗ್ರಹದಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.